ಹಾಸನ: ಮಾಜಿ ಸಿಎಂ ಯಡಿಯೂರಪ್ಪ ಅಂಡ್ ಟೀಂ ಆಪರೇಷನ್ ಕಮಲ ಮಾಡಲಿ. ನಮ್ಮ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಏನು ಬೇಕಾದ್ರೂ ಮಾತಾಡಲಿ. ಅವರನ್ನು ನಾನು ನೆಗ್ಲೆಕ್ಟ್ ಮಾಡುತ್ತೇನೆ. ಅವರ ಹೇಳಿಕೆಗಳಿಗೆ ರಿಯಾಕ್ಟ್ ಮಾಡಿದ್ರೆ ನಾನು ಪೊಳ್ಳೆದ್ದು ಹೋಗುತ್ತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಮಾಜಿ ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ನಡೆ-ನುಡಿ ಎಲ್ಲವೂ ರಾಜ್ಯದ ಜನರಿಗೆ ಗೊತ್ತಿದೆ. ಹಾಗಾಗಿ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಹೋಗಲ್ಲ. ನಿರ್ಲಕ್ಷ್ಯ ಮಾಡೋದು ಒಳ್ಳೆದು ಎಂದರು. ಜೆಡಿಎಸ್ ಶಾಸಕರೊಬ್ಬರನ್ನು ಬಿಜೆಪಿಗೆ ಸೆಳೆಯುವ ಸಂಬಂಧ ಕುರಿತು ಆಡಿಯೋ ಬಿಡುಗಡೆ ನಂತರ ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ಮಿಮಿಕ್ರಿ ಮಾಡಿದ್ದಾರೆ ಎಂದಿದ್ದ ಬಿಎಸ್‍ವೈ ಮತ್ತೆ ನಾನೇ ಮಾತನಾಡಿದ್ದು ಎಂದು ಏಕೆ ಒಪ್ಪಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
Advertisement
Advertisement
ಮೊಬೈಲ್ ಆಡಿಯೋ ರೆಕಾರ್ಡ್ ಯಾರೇ ಮಾಡಿದ್ರೂ ಇವರು ಯಾಕೆ ಮಾತನಾಡಲು ಹೋದರು? ಅವರು ಮಾತನಾಡಿದ್ದು ತಪ್ಪಲ್ಲವೇ? ಅವರು ಏನೇ ಮಾಡಿದ್ರೂ, ನಮ್ಮ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಇದೆಲ್ಲವನ್ನು ಬಿಟ್ಟು ರಾಜ್ಯದಲ್ಲಿ ಭೀಕರ ಬರಗಾಲವಿದೆ. ಆ ಬಗ್ಗೆ ಚಿಂತೆ ಮಾಡಲಿ. ರಾಜ್ಯದ 156 ತಾಲೂಕುಗಳಲ್ಲಿ ಬರಗಾಲವಿದೆ. ಇದನ್ನು ಸಮರ್ಥ ರೀತಿಯಲ್ಲಿ ಎದುರಿಸಲು ನಾವು 3 ಸಾವಿರ ಕೋಟಿ ಕೊಡಬೇಕು ಎಂದು ಕೇಂದ್ರವನ್ನು ಕೇಳಿದ್ದೆವು. ನಮಗೆ ಕೇವಲ 900 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ, ನೆರೆಯ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ನೀಡಿದೆ ಎಂದು ವಾಗ್ದಾಳಿ ನಡೆಸಿದ್ರು.
Advertisement
Advertisement
ಉದ್ಯೋಗಖಾತ್ರಿ ಯೋಜನೆಯಡಿಯೂ ಸಾವಿರಾರು ಕೋಟಿ ರೂ. ಬರಬೇಕಿದೆ. ಹೀಗಿದ್ದೂ ರಾಜ್ಯ ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ರಾಜ್ಯದ ಜನರನ್ನು ಓಟು ಕೇಳುತ್ತಾರೆ. ಕಳೆದ 5 ವರ್ಷಗಳ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿರುವ ಕೊಡುಗೆ ಏನು ಎನ್ನುವುದನ್ನು ನಾಡಿನ ಜನರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಬರಗಾಲ, ಬಡವರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ದಿನ ಬೆಳಗಾದರೆ ಸಾಕು ಆಪರೇಷನ್ ಚಿಂತೆಯಲ್ಲೇ ಮುಳುಗಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv