ಮಂಡ್ಯ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಅಮಾನತ್ತಾದ ಶಾಸಕ ಚಲುವರಾಯಸ್ವಾಮಿ ಗೆದ್ರೆ ನಾನು ರಾಜಕಾರಣ ಬಿಡ್ತೀನಿ. ನನ್ನ ಸವಾಲಿಗೆ ಮುಖ್ಯಮಂತ್ರಿಗಳು ಜವಾಬ್ದಾರಿ ತಗೋತಾರಾ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಸುರೇಶ್‍ಗೌಡ ಸವಾಲೆಸೆದಿದ್ದಾರೆ.
ಜೆಡಿಎಸ್‍ನಿಂದ ಅಮಾನತ್ತಾದ ಏಳು ಜನ ಶಾಸಕರ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ನಾಗಮಂಗಲದಲ್ಲಿ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಸುರೆಶ್‍ಗೌಡ, ಚಲುವರಾಯಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಬಂದ ತಕ್ಷಣ ನಾನು ಆ ಪಕ್ಷ ಬಿಡ್ತೇನೆ. ರಾಹುಲ್‍ಗಾಂಧಿ ಕಳೆದ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಮುಖಂಡರಿಗೆ ಮತ್ತೆ ಟಿಕೆಟ್ ನೀಡೋದಾಗಿ ಭರವಸೆ ನೀಡಿದ್ರು. ಈಗ ಏಳು ಜನರನ್ನ ಸೇರಿಸಿಕೊಂಡು ನಮಗೆ ಟಿಕೆಟ್ ನೀಡದಿದ್ರೆ ಅವರನ್ನೇ ಕೇಳುತ್ತೇವೆ. 20 ವರ್ಷಗಳಿಂದ ಚಲುವರಾಯಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡಿದ್ದಾರೆ. ಇವರಿಗೆ ಮಾನ, ಮರ್ಯಾದೆ ಇದೆಯಾ? ಕಾಂಗ್ರೆಸ್ ಪಕ್ಷವನ್ನ ಬೇರೆ ಯಾರೂ ಸೋಲಿಸಲ್ಲ. ಕೆಪಿಸಿಸಿ, ಮುಖ್ಯಮಂತ್ರಿ, ಮಂತ್ರಿಗಳೇ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ಅಂದ್ರು.
Advertisement
ಚಲುವರಾಯಸ್ವಾಮಿ ಮಾತು ಕೇಳಿಕೊಂಡು ಮುಖ್ಯಮಂತ್ರಿ ನಾನು ಅಧ್ಯಕ್ಷನಾಗಿರುವ ಸಂಸ್ಥೆಗಳ ತನಿಖೆ ಮಾಡಿಸುತ್ತಿದ್ದಾರೆ. ನನ್ನ ದುರಾದೃಷ್ಟ, ಸರ್ಕಾರ ಬಂದ ಮೂರು ತಿಂಗಳಿಂದಲೇ ನನಗೆ ತೊಂದರೆ ಕೊಡೋದು ಶುರುವಾಯ್ತು ಎಂದು ಸುರೇಶ್‍ಗೌಡ ಅಸಮಾಧಾನ ಹೊರಹಾಕಿದ್ರು. ಇನ್ನು ಚಲುವರಾಯಸ್ವಾಮಿ ಸೇರಿದಂತೆ ಏಳು ಜನ ಶಾಸಕರು ದುಡ್ಡು ತಗೊಂಡು ಓಟ್ ಹಾಕಿ ಎಲ್ಲವನ್ನ ಕೊಟ್ಟ ಪಕ್ಷಕ್ಕೆ ಮೋಸ ಮಾಡಿದ್ದಾರೆ. ವಿಶ್ವಾಸದ್ರೋಹಿಗಳು, ಮೋಸಗಾರರಾದ ಇವರನ್ನ ದೇವೇಗೌಡರೇ ಪಕ್ಷಕ್ಕೆ ವಾಪಸ್ ಕರೆತಂದ್ರೂ ಇವರು ಗೆಲ್ಲಲ್ಲ. ಬೇಕಾದ್ರೆ ಏಳು ಜನರೂ ದುಡ್ಡು ತಗೊಂಡು ಓಟ್ ಹಾಕಲಿಲ್ಲ ಎಂದು ಮಂಜುನಾಥಸ್ವಾಮಿ ಎದುರು ಪ್ರಮಾಣ ಮಾಡಲಿ ಎಂದು ಸುರೇಶ್‍ಗೌಡ ಸವಾಲು ಹಾಕಿದ್ರು.