ನವದೆಹಲಿ: ದೇಶದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಮ್ ಸಂಸ್ಥೆ ವೊಡಾಫೋನ್‍ನ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಇಂದು ಘೋಷಿಸಿವೆ.
ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ನಿರ್ಮಾಣವಾಗಲಿದೆ. ಟೆಲಿಕಾಮ್ ಮಾರುಕಟ್ಟೆಗೆ ಜಿಯೋ ಎಂಟ್ರಿಯಾದ ನಂತರ ಸ್ಪರ್ಧೆ ಹೆಚ್ಚಾಗಿದ್ದು, ಸಂಸ್ಥೆಗಳ ವಿಲೀನಕ್ಕೆ ಉತ್ತೇಜಿಸಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
Advertisement
ಡೀಲ್ ಪ್ರಕಾರ ಹೊಸ ಕಂಪೆನಿಯಲ್ಲಿ ವೋಡಫೋನ್ ಶೇ.45 ರಷ್ಟು ಪಾಲು ಹೊಂದಲಿದ್ದು, ಶೇ. 26 ರಷ್ಟು ಪಾಲುದಾರಿಕೆ ಮೇಲೆ ಐಡಿಯಾ ಕಂಪೆನಿಗೆ ಹಕ್ಕು ಇರಲಿದೆ.
Advertisement
ಮಾರ್ಚ್ 16ರಂದು ವೊಡಾಫೋನ್ ನ ಅಧಿಕಾರಿಗಳು ಸಭೆ ನಡೆಸಿ ನಿಯಮಗಳನ್ನು ಪರಿಶೀಲಿಸಿ ಕಂಪೆನಿಗಳ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದರು. ತಜ್ಞರ ಪ್ರಕಾರ ಐಡಿಯಾ ಮತ್ತು ವೊಡಾಫೋನ್ ಇಂಡಿಯಾದ ವಿಲೀನದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಹಾಗೂ ಭಾರತಿ ಏರ್‍ಟೆಲ್ ಜೊತೆಗೆ ಸ್ಪರ್ಧಿಸಲು ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ಕಂಪೆನಿಗಳು ವಿಲೀನವಾಗುತ್ತಿರುವುದು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement
ಈ ವಿಲೀನದೊಂದಿಗೆ ಆದಿತ್ಯಾ ಬಿರ್ಲಾ ಗ್ರೂಪ್ ದೇಶದಲ್ಲಿ ಉತ್ತಮ ಗುಣಮಟ್ಟದ ಡಿಜಿಟಲ್ ಸೇವೆಯನ್ನ ಒದಗಿಸಲಿದೆ. ಇದು ಭಾರತೀಯರನ್ನ ಡಿಜಿಟಲ್ ಜೀವನಶೈಲಿಯತ್ತ ಕೊಂಡಯ್ಯಲಿದ್ದು, ಸರ್ಕಾರದ ಡಿಜಿಟಲ್ ಇಂಡಿಯಾ ಉದ್ದೇಶ ಸಾಕಾರವಾಗಲಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‍ನ ಅಧ್ಯಕ್ಷರಾದ ಮಂಗಳಂ ಬಿರ್ಲಾ ಹೇಳಿದ್ದಾರೆ. ಮುಂದಿನ ವರ್ಷದ ವೇಳೆಗೆ ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ವಿಲೀನ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Advertisement
ಇದೇ ತಿಂಗಳ ಆರಂಭದಲ್ಲಿ ದೇಶದ 6 ರಾಜ್ಯಗಳಲ್ಲಿ ಭಾರತಿ ಏರ್‍ಟೆಲ್ ಸಂಸ್ಥೆ ನಾರ್ವೇ ಯ ಟೆಲಿನಾರ್ ಸಂಸ್ಥೆಯನ್ನ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿತ್ತು.
ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ