ಢಾಕಾ/ನವದೆಹಲಿ: 2026ರ ಟಿ20 ವಿಶ್ವಕಪ್ (T20 World Cup 2026) ಪಂದ್ಯಗಳನ್ನಾಡಲು ಭಾರತಕ್ಕೆ ಬರಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಐಸಿಸಿ ಲಾಸ್ಟ್ ವಾರ್ನಿಂಗ್ ಕೊಟ್ಟಿದೆ. ಭಾರತದಲ್ಲಿ (India) ಪಂದ್ಯ ಆಡಲು ಬರದಿದ್ದರೆ, ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದೆ.
ಮೂಲಗಳ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತನ್ನ ನಿರ್ಧಾರ ಬದಲಾಯಿಸಿಕೊಳ್ಳಲು, ಜನವರಿ 21 ರ ವರೆಗೆ ಗಡುವು ನೀಡಿದೆ. ಬಾಂಗ್ಲಾ ತಂಡವನ್ನ ಭಾರತಕ್ಕೆ ಕಳುಹಿಸಲು ಒಪ್ಪದಿದ್ದರೆ, ಪ್ರಸ್ತುತ ಪುರುಷರ ಟಿ20 ರ‍್ಯಾಂಕಿಂಗ್ ಆಧಾರದ ಮೇಲೆ ಬೇರೊಂದು ಯುರೋಪಿಯನ್ ತಂಡವನ್ನ ಟೂರ್ನಿಗೆ ಆಯ್ಕೆ ಮಾಡಲಿದೆ ಎಂದು ಐಸಿಸಿ ಎಚ್ಚರಿಕೆ ನೀಡಿದೆ.
ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನ ಐಪಿಎಲ್‌ನಿಂದ ಹೊರದಬ್ಬಿದ ಬಳಿಕ ಬಾಂಗ್ಲಾ ಈ ರೀತಿ ಕ್ಯಾತೆ ತೆಗೆದಿದೆ. ಭದ್ರತಾ ಕಾರಣಗಳನ್ನ ನೀಡಿ ತನ್ನ ಪಾಲಿನ ಪಂದ್ಯಗಳನ್ನ ನೆನೆಯ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಪಟ್ಟು ಹಿಡಿದಿದೆ. ಅದಕ್ಕಾಗಿ ಐರ್ಲೆಂಡ್ ಜೊತೆಗೆ ಲೀಗ್ ಪಂದ್ಯಗಳನ್ನು ಬದಲಾವಣೆ ಮಾಡುವಂತೆ ಕೇಳಿಕೊಂಡಿದೆ. ಏಕೆಂದ್ರೆ ಐರ್ಲೆಂಡ್ ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಆದ್ರೆ ಬಾಂಗ್ಲಾ ವಿರುದ್ಧ ಅಥವಾ ಭಾರತದಲ್ಲಿ ಆಡುವ ಇತರ ಯಾವುದೇ ತಂಡಗಳು ಈ ರೀತಿ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿಲ್ಲ ಎಂದು ಐಸಿಸಿ ಬಿಸಿಬಿಗೆ ತಿಳಿಸಿದೆ.
ಬಿಸಿಬಿ ಹಾಗೂ ಐಸಿಸಿ ನಡುವಿನ ಬಿಕ್ಕಟ್ಟು ಈಗ 3ನೇ ವಾರಕ್ಕೆ ತಲುಪಿದೆ. ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿ ಫೆ.7 ರಂದು ಪಾಕಿಸ್ತಾನ ಮತ್ತು ನೆದರ್ಲೆಂಡ್ ನಡುವಿನ ಪಂದ್ಯದಿಂದ ಶುರುವಾಗಲಿದೆ. ಒಂದುವ ವೇಳೆ ಬಾಂಗ್ಲಾ ಭಾರತದಲ್ಲಿ ಆಡಲು ನಿರಾಕರಿಸಿದ್ರೆ, ಬೇರೊಂದು ತಂಡಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಜ.21 ರ ವರೆಗೆ ಐಸಿಸಿ ಗಡುವು ನೀಡಿದೆ.
ದಾಖಲೆ ಬೆಲೆಗೆ ಬಿಕರಿಯಾಗಿದ್ದ ರೆಹಮಾನ್
2026ರ ಐಪಿಎಲ್ ಟೂರ್ನಿಗಾಗಿ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್ ಫ್ರಾಂಚೈಸಿಯು 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಗೂ ಮುಸ್ತಾಫಿಜುರ್ ಪಾತ್ರವಾಗಿದ್ದರು. ಆದ್ರೆ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ. ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ (IPL) ಆಡಬಾರದು ಎಂಬ ಆಕ್ರೋಶ ಕ್ರಿಕೆಟ್ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್‌ನಿಂದ ಕೈಬಿಡುವಂತೆ ಫ್ರಾಂಚೈಸಿಗೆ ಸೂಚಿಸಿತ್ತು.
ಫೆಬ್ರವರಿಯಲ್ಲಿ ಟಿ20 ವಿಶ್ವಕಪ್
2026ರ ಟಿ20 ವಿಶ್ವಕಪ್ ಟೂರ್ನಿಯ ಹಕ್ಕು ಭಾರತದ್ದೇ ಆದರೂ ಶ್ರೀಲಂಕಾ ಜೊತೆಗಿನ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ. ಭಾರತ ಮತ್ತು ಪಾಕ್ ನಡುವಿನ ಸಂಬಂಧ ಹದಗೆಟ್ಟಿದ್ದರಿಂದ, ಪಾಕಿಸ್ತಾನದ ಎಲ್ಲಾ ಪಂದ್ಯಗಳು ಲಂಕಾದಲ್ಲಿ ನಡೆಯಲಿದೆ. ಬಾಂಗ್ಲಾ ತಂಡವು ಫೆಬ್ರವರಿ 7 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ಅದೇ ಸಮಯಕ್ಕೆ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ನಡುವಿನ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ಫೆ.9 ರಂದು ಇಟೇ ವಿರುದ್ಧ, ಫೆ.14 ರಂದು ಇಂಗ್ಲೆಂಡ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ಹಾಗೂ ಅಂತಿಮ ಲೀಗ್ ಸುತ್ತಿನ ಪಂದ್ಯವನ್ನ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೇಪಾಳದ ವಿರುದ್ಧ ಆಡಬೇಕಿದೆ.



