125 ರನ್‍ಗಳ ಭರ್ಜರಿ ಜಯ – 2ನೇ ಸ್ಥಾನಕ್ಕೆ ನೆಗೆದ ಭಾರತ

Public TV
2 Min Read
Team India

ಮ್ಯಾಂಚೆಸ್ಟರ್: ಬ್ಯಾಟಿಂಗ್, ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 125 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ.

269 ರನ್ ಗಳ ಗುರಿಯನ್ನು ಪಡೆದ ವಿಂಡೀಸ್ 34.2 ಓವರ್ ಗಳಲ್ಲಿ 143 ರನ್ ಗಳಿಗೆ ಆಲೌಟ್ ಆಯ್ತು. ಆಡಿರುವ ಆರು ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಒಂದು ಡ್ರಾ ಫಲಿತಾಂಶದೊಂದಿಗೆ ಒಟ್ಟು 11 ಅಂಕಗಳನ್ನು ಕಲೆ ಹಾಕಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಭಾರತ ನೆಗೆದಿದೆ. ಈ ಮೂಲಕ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಬಹುತೇಕ ಸುಗಮಗೊಂಡಿದೆ.

ಏಳು ಪಂದ್ಯಗಳಲ್ಲಿ ಐದನೇ ಸೋಲು ಅನುಭವಿಸಿರುವ ವೆಸ್ಟ್ ಇಂಡೀಸ್ ನಿರ್ಗಮನದ ಹಾದಿ ಹಿಡಿದಿದೆ. ತಲಾ ಒಂದು ಗೆಲುವು ಹಾಗೂ ಡ್ರಾ ಫಲಿತಾಂಶ ದಾಖಲಿಸಿರುವ ವಿಂಡೀಸ್ ಮೂರು ಅಂಕಗಳೊಂದಿಗೆ ಎಂಟನೇಸ್ಥಾನದಲ್ಲಿದೆ.

ಆರಂಭದಲ್ಲಿ ಶಮಿ ಆಘಾತ ನೀಡಿದರೆ ಮಧ್ಯಮ ಕ್ರಮಾಂಕದಲ್ಲಿ ಬುಮ್ರಾ ಎರಡು ಎಸೆತಗಳಲ್ಲಿ 2 ವಿಕೆಟ್ ಪಡೆಯುವ ಮೂಲಕ ಶಾಕ್ ನೀಡಿದರು. ಶಮಿ 4 ವಿಕೆಟ್ ಕಿತ್ತರೆ, ಬುಮ್ರಾ ಮತ್ತು ಚಹಲ್ ತಲಾ 2 ವಿಕೆಟ್, ಪಾಂಡ್ಯ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‍ಗಳ ವೈಫಲ್ಯದ ನಡುವೆಯೂ ಕೊಹ್ಲಿ, ಧೋನಿ ಅರ್ಧಶತಕ, ಪಾಂಡ್ಯ, ರಾಹುಲ್ ಉತ್ತಮ ಆಟದಿಂದ ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿತ್ತು.

38.2 ಓವರ್ಗಳಲ್ಲಿ 180 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಭಾರತ 250 ರನ್‍ಗಳ ಗಡಿಯನ್ನು ದಾಟುವುದು ಅನುಮಾನವಾಗಿತ್ತು. ಆದರೆ ಪಾಂಡ್ಯ ಮತ್ತು ಧೋನಿ ಗಟ್ಟಿ ನಿಂತು ಆಡಿದ ಪರಿಣಾಮ ಭಾರತ ಉತ್ತಮ ಮೊತ್ತವನ್ನು ಪೇರಿಸಿತ್ತು.

1 ಸಿಕ್ಸರ್, 1 ಬೌಂಡರಿ ಹೊಡೆದು ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 18 ರನ್ ಗಳಿಸಿ ಔಟಾದರು. ಮೂರನೇ ಅಂಪೈರ್ ಈ ಔಟ್ ತೀರ್ಪು ನೀಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಎರಡನೇ ವಿಕೆಟಿಗೆ ರಾಹುಲ್ ಮತ್ತು ಕೊಹ್ಲಿ 69 ರನ್ ಜೊತೆಯಾಟವಾಡಿದರು. ರಾಹುಲ್ 48 ರನ್(64 ಎಸೆತ, 4 ಬೌಂಡರಿ) ಹೊಡೆದರೆ ಕೊಹ್ಲಿ 72 ರನ್( 82 ಎಸೆತ, 8 ಬೌಂಡರಿ) ಹೊಡೆದು ಔಟಾದರು.

ನಂತರ ಬಂದ ವಿಜಯ್ ಶಂಕರ್ ಮತ್ತು ಕೇದಾರ್ ಜಾಧವ್ ಕ್ರಮವಾಗಿ 14, 7 ರನ್ ಗಳಿಸಿ ಪೆವಿಲಿಯನ್‍ಗೆ ನಡೆದರು. ಕೊನೆಯಲ್ಲಿ ಧೋನಿ ಮತ್ತು ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿ 6ನೇ ವಿಕೆಟಿಗೆ 60 ಎಸೆತಗಳಲ್ಲಿ 70 ರನ್ ಜೊತೆಯಾಟವಾಡಿದರು. ಪಾಂಡ್ಯ 46 ರನ್(38 ಎಸೆತ, 5 ಬೌಂಡರಿ) ಹೊಡೆದರೆ ಧೋನಿ 56 ರನ್(61 ಎಸೆತ,3 ಬೌಂಡರಿ, 2 ಸಿಕ್ಸರ್) ಸಿಡಿಸಿದರು. 50ನೇ ಓವರ್ನಲ್ಲಿ ಧೋನಿ 2 ಸಿಕ್ಸರ್, ಒಂದು ಬೌಂಡರಿ ಸಿಡಿಸಿ ರನ್ ಏರಿಸಿದ್ದರು.

ರೋಚ್ ಮೂರು ವಿಕೆಟ್ ಪಡೆದರೆ, ಕೊಟ್ರೆಲ್ ಮತ್ತು ಹೋಲ್ಡರ್ ತಲಾ 2 ವಿಕೆಟ್ ಪಡೆದಿದ್ದರು. 72 ರನ್ ಹೊಡೆದ ಕೊಹ್ಲಿ ಪದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Share This Article
Leave a Comment

Leave a Reply

Your email address will not be published. Required fields are marked *