ದುಬೈ: ಇಂದು ಪ್ರಕಟವಾದ ಐಸಿಸಿ ಟಿ20 ರ‍್ಯಾಂಕಿಂಗ್ ಲೀಸ್ಟ್‌ನಲ್ಲಿ ಬ್ಯಾಟರ್‌ಗಳ (T20 Batting Rankings) ವಿಭಾಗದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (Travis Head) ಭಾರತದ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.
ಕಳೆದ ಡಿಸೆಂಬರ್‌ನಿಂದ ಸೂರ್ಯಕುಮಾರ್ ಅವರು ಈವರೆಗೆ ಅಗ್ರಸ್ಥಾನ ಕಾಪಾಡಿಕೊಂಡು ಬಂದಿದ್ದರು. ಟಿ20 ವಿಶ್ವಕಪ್‍ನಲ್ಲಿ ತೋರಿದ ಉತ್ತಮ ಬ್ಯಾಟಿಂಗ್ ಪರಿಣಾಮ ಟ್ರಾವಿಸ್ ಹೆಡ್ ಅಗ್ರ ಕ್ರಮಾಂಕಕ್ಕೆ ಏರಿದ್ದಾರೆ. ಟ್ರಾವಿಸ್ ಹೆಡ್ ಅವರು ಸೂರ್ಯ ಕುಮಾರ್ (842 ಪಾಯಿಂಟ್ಸ್) ಅವರಿಗಿಂತ ಎರಡು ಪಾಯಿಂಟ್ಸ್ ಮುಂದಿದ್ದಾರೆ.
ಟ್ರಾವಿಸ್ ಹೆಡ್ ಈ ಟೂರ್ನಿಯಲ್ಲಿ ಭಾರತದ ವಿರುದ್ಧ ಸೂಪರ್ 8 ಪಂದ್ಯದಲ್ಲಿ ಗಳಿಸಿದ 76 ರನ್ ಸೇರಿದಂತೆ ಎರಡು ಅರ್ಧಶತಕಗಳೊಂದಿಗೆ 255 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ತಂಡ ಹೊರಬಿದ್ದಿರುವ ಕಾರಣ, ಸೂರ್ಯ ಅವರಿಗೆ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶ ಸಹ ಇದೆ.
ಇಂಗ್ಲೆಂಡ್‍ನ ಫಿಲ್ ಸಾಲ್ಟ್ (816), ಪಾಕ್‍ನ ಬಾಬರ್ ಅಜಂ (755) ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (746) ಕ್ರಮವಾಗಿ 3, 4 ಮತ್ತು 5 ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ನಂತರದ ಸ್ಥಾನಗಳಲ್ಲಿದ್ದಾರೆ. ಜಾನ್ಸನ್ (ವೆಸ್ಟ್ ಇಂಡೀಸ್) ಹತ್ತನೇ ಸ್ಥಾನದಲ್ಲಿದ್ದಾರೆ. ಮೊದಲ ಸಲ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ.