ಲಾಹೋರ್: ಪಾಕಿಸ್ತಾನದ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 351 ರನ್ ಗಳಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ 352 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ. ಅಲ್ಲದೇ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಅತಿಹೆಚ್ಚು ರನ್ ಕೂಡ ಇದಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 5.2 ಓವರ್‌ಗಳಲ್ಲೇ 43 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್ ಅವರಂತಹ ದೈತ್ಯ ಬೌಲರ್‌ಗಳಿಲ್ಲದೇ ಅನೇಕ ಹೊಸಬರೊಂದಿಗೆ ಕಣಕ್ಕಿಳಿದ ಆಸೀಸ್ ಸ್ಪರ್ಧಾತ್ಮಕ ಪೈಪೋಟಿ ನೀಡುವ ನಿರೀಕ್ಷೆ ಹೆಚ್ಚಿಸಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಯಾದ ಬೆನ್ ಡಕೆಟ್ ಹಾಗೂ ಜೋ ರೂಟ್ ಶತಕದ ಜೊಯಾಟ ನೀಡುವ ಮೂಲಕ ಇಂಗ್ಲೆಂಡ್‌ಗೆ ಜೀವ ತುಂಬಿದರು.
ಡಕೆಟ್, ರೂಟ್ ಶತಕದ ಜೊತೆಯಾಟ:
ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 155 ಎಸೆತಗಳಲ್ಲಿ 158 ರನ್‌ಗಳ ಜೊತೆಯಾಟ ನೀಡಿತು. ರೂಟ್ 78 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 68 ರನ್ ಗಳಿಸಿ ಔಟಾದರು. ಆ ಬಳಿಕವೂ ಘಾತುಕ ದಾಳಿ ನಡೆಸಿದ ಬೆನ್ ಡಕೆಟ್ ಆಸೀಸ್ ಬೌಲರ್‌ಗಳನ್ನು ಚೆನ್ನಾಗಿ ಬೆಂಡೆತ್ತಿದರು. ಕೊನೆಯವರೆಗೂ ಹೋರಾಡಿದ ಡಕೆಟ್ 143 ಎಸೆತಗಳಲ್ಲಿ 165 ರನ್ (17 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಇದರೊಂದಿಗೆ ನಾಯಕ ಜೋಸ್ ಬಟ್ಲರ್ 23 ರನ್, ಜೋಫ್ರಾ ಆರ್ಚರ್ 21 ರನ್, ಲಿಯಾಮ್ ಲಿವಿಂಗ್‌ಸ್ಟನ್14 ರನ್, ಜೇಮಿ ಸ್ಮಿತ್ 15 ರನ್, ಫಿಲ್ ಸಾಲ್ಟ್ 10 ರನ್‌ಗಳ ಕೊಡುಗೆ ನೀಡಿದರು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿಹೆಚ್ಚು ರನ್‌ಗಳಿಸಿದ ಟೀಮ್‌ಗಳು
* 351/8 – ಇಂಗ್ಲೆಂಡ್ – ಲಾಹೋರ್ – 2025
* 347/4 – ನ್ಯೂಜಿಲೆಂಡ್ – ದಿ ಓವಲ್ – 2004
* 338/4 – ಪಾಕಿಸ್ತಾನ – ಓವಲ್ – 2017
* 331/7 – ಭಾರತ – ಕಾರ್ಡಿಫ್ – 2013
* 323/8 – ಇಂಗ್ಲೆಂಡ್ – ಸೆಂಚುರಿಯನ್ – 2009
* 322/3 – ಶ್ರೀಲಂಕಾ – ದಿ ಓವಲ್ – 2017
ಇನ್ನೂ ಆಸ್ಟ್ರೇಲಿಯಾ ಪರ ಬೆನ್ ದ್ವಾರ್ಶುಯಿಸ್ 3 ವಿಕೆಟ್ ಕಿತ್ತರೆ, ಮಾರ್ನಸ್ ಲಾಬುಶೇನ್, ಆಡಂ ಝಂಪಾ ತಲಾ 2 ವಿಕೆಟ್, ಗ್ಲೆನ್ ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು.