ವರುಣ್‌ ಬೆಂಕಿ ಬೌಲಿಂಗ್‌ಗೆ ನ್ಯೂಜಿಲೆಂಡ್‌ ಬರ್ನ್‌ – ಭಾರತಕ್ಕೆ 44 ರನ್‌ಗಳ ಭರ್ಜರಿ ಜಯ

Public TV
2 Min Read
Icc champions trophy Team india

– ಅಜೇಯ ಜಯದೊಂದಿಗೆ ಸೆಮಿ ಪ್ರವೇಶ
– ಮಂಗಳವಾರ ಆಸೀಸ್‌ ಜೊತೆ ಸೆಮಿ ಕಾದಾಟ

ದುಬೈ: ವರುಣ್‌ ಚಕ್ರವರ್ತಿ (Varun Chakravarthy)  ಅವರ ಬೆಂಕಿ ಬೌಲಿಂಗ್‌ನಿಂದ ನ್ಯೂಜಿಲೆಂಡ್‌ ವಿರುದ್ಧ ಭಾರತ (Team India)  44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಜೇಯ ಜಯದೊಂದಿಗೆ ಸೆಮಿ ಫೈನಲ್‌ ಪ್ರವೇಶಿದ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 249 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ (New Zealand) 45.3 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟ್‌ ಆಯ್ತು.

ದುಬೈ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗಲಿದೆ ಎನ್ನುವದನ್ನು ಮೊದಲೇ ತಿಳಿದಿದಿದ್ದ ಭಾರತ ಕಳೆದ ಎರಡೂ ಪಂದ್ಯಗಳಲ್ಲಿ ಮೂವರು ಸ್ಪಿನ್ನರ್‌ಗಳನ್ನು ಅಳವಡಿಸಿತ್ತು. ಆದರೆ ಈ ಪಂದ್ಯಕ್ಕೆ ಕುಲದೀಪ್‌, ಅಕ್ಷರ್‌, ರವೀಂದ್ರ ಜಡೇಜಾ ಜೊತೆ ವರುಣ್‌ ಚಕ್ರವರ್ತಿ ಅವರನ್ನು ಇಳಿಸಿತ್ತು.

Varun Chakravarthy

ಹರ್ಷಿತ್‌ ರಾಣಾ ಬದಲಿಗೆ ವರುಣ್‌ ಚಕ್ರವರ್ತಿ ಅವರನ್ನು ಇಳಿಸಿದ ಪ್ರಯೋಗ ಫಲ ನೀಡಿತು. ವರುಣ್‌ ಚಕ್ರವರ್ತಿ ಅಮೂಲ್ಯ 5 ವಿಕೆಟ್‌ ಉರುಳಿಸುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಡವುದರ ಜೊತೆಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇಂದಿನ ಪಂದ್ಯ ಗೆಲ್ಲುವುದರೊಂದಿಗೆ ಭಾರತ ಮಂಗಳವಾರ ಆಸ್ಟ್ರೇಲಿಯಾವನ್ನು ಎದುರಿಸಲಿದ್ದರೆ ಸೋತ ನ್ಯೂಜಿಲೆಂಡ್‌ ಬುಧವಾರ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಹಾಗೆ ನೋಡಿದರೆ ನ್ಯೂಜಿಲೆಂಡ್‌ 3 ವಿಕೆಟ್‌ ನಷ್ಟಕ್ಕೆ 133 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಯಾವಾಗ ಟಾಮ್‌ ಲ್ಯಾಥಮ್‌ ಜಡೇಜಾ ಬೌಲಿಂಗ್‌ ಎಲ್‌ಬಿಯಾಗಿ ಔಟಾದರೋ ಆವಾಗನಿಂದ ನ್ಯೂಜಿಲೆಂಡ್‌ ಪತನ ಆರಂಭವಾಯಿತು.

 

 

 

ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ಕೇನ್‌ ವಿಲಿಯಮ್ಸನ್‌ 81 ರನ್‌(120 ಎಸೆತ, 7 ಬೌಂಡರಿ) ಹೊಡೆದು ಇನ್ನಿಂಗ್ಸ್‌ ಕಟ್ಟಿದ್ದರು. ಕೊನೆಯಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್ 28 ರನ್‌(31 ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದು ಅಬ್ಬರಿಸಿದರೂ ವಿಕೆಟ್‌ ಒಪ್ಪಿಸಿದರು.

ವೇಗದ ಬೌಲರ್‌ಗಳ ಪೈಕಿ ಶಮಿ ಮತ್ತು ಪಾಂಡ್ಯ ತಲಾ 4 ಓವರ್‌ ಮಾತ್ರ ಎಸೆದಿದ್ದರು. ಈ ಪೈಕಿ ಪಾಂಡ್ಯಗೆ 1 ವಿಕೆಟ್‌ ಸಿಕ್ಕಿದ್ದರೆ ಉಳಿದ 9 ವಿಕೆಟ್‌ಗಳು ಸ್ಪಿನ್ನರ್‌ಗಳ ಬೌಲಿಂಗ್‌ನಲ್ಲಿ ಬಂದಿದ್ದು ಎನ್ನುವುದು ವಿಶೇಷ. ವರುಣ್‌ ಚಕ್ರವರ್ತಿ 10 ಓವರ್‌ ಎಸೆದು 42 ರನ್‌ ನೀಡಿ 5 ವಿಕೆಟ್‌ ಪಡೆದರೆ ಕುಲದೀಪ್‌ ಯಾದವ್‌ 9.3 ಓವರ್‌ ಎಸೆದು 56 ರನ್‌ ನೀಡಿ 2 ವಿಕೆಟ್‌ ಕಿತ್ತರು. ರವೀಂದ್ರ ಜಡೇಜಾ ಮತ್ತು ಅಕ್ಷರ್‌ ಪಟೇಲ್‌ ತಲಾ ಒಂದು ವಿಕೆಟ್‌ ಪಡೆದರು. ಅಕ್ಷರ್‌ ಬೌಲಿಂಗ್‌ನಲ್ಲಿ ಕೇನ್‌ ವಿಲಿಯಮ್ಸನ್‌ ಮುಂದೆ ಬಂದು ಹೊಡೆಯಲು ಯತ್ನಿಸಿ ಸ್ಟಂಪ್‌ ಔಟ್‌ ಆಗಿದ್ದರು.

ಟಾಸ್‌ ಸೋತು ಬ್ಯಾಟ್‌ ಮಾಡಿದ ಭಾರತ ಪರ ಶ್ರೇಯಸ್‌ ಅಯ್ಯರ್‌ 79 ರನ್‌(98 ಎಸೆತ, 4 ಬೌಂಡರಿ, 2 ಸಿಕ್ಸರ್‌), ಅಕ್ಷರ್‌ ಪಟೇಲ್‌ 42 ರನ್‌(61 ಎಸೆತ, 3 ಬೌಂಡರಿ, 1 ಸಿಕ್ಸರ್‌), ಹಾರ್ದಿಕ್‌ ಪಾಂಡ್ಯ 45 ರನ್‌(45 ಎಸೆತ, 4 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರು.

Share This Article