ರಾವಲ್ಪಿಂಡಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ (ICC Champions Trophy 2025) ಪಯಣವನ್ನು ನಿರಾಸೆಯಲ್ಲಿ ಕೊನೆಗೊಳಿಸಿದ ಪಾಕಿಸ್ತಾನ (Pakistan), ಪಂದ್ಯಗಳಲ್ಲಿ ಭಾಗವಹಿಸಿದ್ದಕ್ಕೆ 2.3 ಕೋಟಿ ರೂ. ನಗದು ಬಹುಮಾನವನ್ನು ಪಡೆಯಲಿದೆ.
ಇಂದು (ಫೆ.27) ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಕೊನೆಯ ಲೀಗ್ ಪಂದ್ಯವನ್ನು ಆಡಬೇಕಿತ್ತು.ಆದರೆ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಪಂದ್ಯ ಎರಡೂ ತಂಡಗಳಿಗೆ ಔಪಚಾರಿಕ ಪಂದ್ಯವಾಗಿತ್ತು. ಈಗಾಗಲೇ ಗುಂಪು ʼಎʼ ನಿಂದ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ.
ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಪಾಕ್, ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಸೆಣಸಾಡಿ, ಸೋಲು ಕಂಡಿತು. ಇದು ಪಾಕ್ ತಂಡದ ಮತ್ತೊಂದು ಹಿನ್ನಡೆಗೆ ಕಾರಣವಾಯಿತು.
ನ್ಯೂಜಿಲೆಂಡ್ ಮರುದಿನ ಬಾಂಗ್ಲಾದೇಶವನ್ನು ಸೋಲಿಸಿದಾಗ ಪಾಕಿಸ್ತಾನ, ಹಾಗೂ ಬಾಂಗ್ಲಾ ಎರಡೂ ತಂಡಗಳು ಪಂದ್ಯದಿಂದ ಹೊರಬಿದ್ದವು. ಪಾಕಿಸ್ತಾನ ಟೂರ್ನಿಯಲ್ಲಿ ಭಾಗವಹಿಸಿದ್ದಕ್ಕೆ 2,65,000 ಡಾಲರ್ (ಸರಿಸುಮಾರು 2.3 ಕೋಟಿ ರೂ.) ನಗದು ಬಹುಮಾನ ಪಡೆಯಲಿದೆ.
8 ವರ್ಷಗಳ ವಿರಾಮದ ನಂತರ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 6.9 ಮಿಲಿಯನ್ ಡಾಲರ್ (60,13,03,521 ರೂ) ಬಹುಮಾನ ಮೊತ್ತವಿದೆ. ಇದು 2017 ರ ಆವೃತ್ತಿಗಿಂತ 53% ಹೆಚ್ಚಳವಾಗಿದೆ.
ಯಾರ‍್ಯಾರಿಗೆ ಎಷ್ಟು ಹಣ?
ಟೂರ್ನಿ ಜೇತರು 2.24 ಮಿಲಿಯನ್ ಡಾಲರ್ (19,52,05,780 ರೂ.) ನಗದು ಬಹುಮಾನ ಪಡೆಯಲಿದ್ದಾರೆ. ರನ್ನರ್ ಅಪ್ ತಂಡ 1.12 ಮಿಲಿಯನ್ ಡಾಲರ್ (9,76,02,680 ರೂ.) ಬಹುಮಾನದ ಮೊತ್ತ ಪಡೆಯಲಿದ್ದಾರೆ. ಸೆಮಿಫೈನಲ್‌ನಲ್ಲಿ ಸೋತವರು ತಲಾ 560,000 ಡಾಲರ್ ( 4,88,00,696 ರೂ.) ಬಹುಮಾನದ ಹಣ ಪಡೆಯಲಿದ್ದಾರೆ.