ಕಟಾರಿಯಾಗೆ ಬೆದರಿಕೆ ಹಾಕಿದ್ದ ಶಾಸಕ ಶಿವಮೂರ್ತಿಗೆ ಸಿಎಂ ಕ್ಲಾಸ್ ತೆಗೊಂಡಿದ್ದು ಹೀಗೆ

Public TV
1 Min Read
KATARI CM SHIVAMURTI

ಬೆಂಗಳೂರು: ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಶಾಸಕ ಶಿವಮೂರ್ತಿನಾಯ್ಕ್ ಗೆ ಸಿಎಂ ಸಿದ್ದರಾಮಯ್ಯ ಚೆನ್ನಾಗಿ ಕ್ಲಾಸ್ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಮಂಗಳವಾರ ಸಂಜೆ ಶಿವಮೂರ್ತಿ ನಾಯ್ಕ್ ಅವರು ಗಲಾಟೆ ಬಗ್ಗೆ ಸಿಎಂ ಗೆ ಮಾಹಿತಿ ನೀಡಲು ಸಿಎಂ ನಿವಾಸಕ್ಕೆ ತೆರಳಿದ್ದರು. ಎಸ್‍ಸಿ ಎಸ್‍ಟಿ ಸೌಲಭ್ಯಗಳಿಗೆ ಅಧಿಕಾರಿ ಕಟಾರಿಯಾ ಅಡ್ಡಿ ಮಾಡುತ್ತಿದ್ದಾರೆಂದು ಶಿವಮೂರ್ತಿ ಆರೋಪಿಸಿದಾಗ, ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ವೇನಯ್ಯ ನಿನಗೆ ಎಂದು ಪ್ರಶ್ನಿಸಿ ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಇಂತಹ ನಾನ್ ಸೆನ್ಸ್ ಕೆಲಸ ಎಲ್ಲಾ ಮಾಡಬೇಡ, ಐಎಎಸ್ ಅಧಿಕಾರಿಗಳಿಗೆ ಬೈಯೋದು ಅಂದ್ರೆ ಏನು ಅನ್ಕೋಂಡಿದಿಯಾ, ಹೆಚ್ಚು ಕಡಿಮೆ ಆದರೆ ಜೈಲಿಗೆ ಕಳುಹಿಸುತ್ತಾರೆ ಹುಷಾರ್. ಲಾಸ್ಟ್ ಎಲೆಕ್ಷನ್‍ನಲ್ಲಿ ಬಿ-ಫಾರಂ ಕೊಡಿಸಿದ್ದು ನಾನೇ ಅಲ್ವ ನಿನಗೆ, ಎಲೆಕ್ಷನ್ ಸಮಯದಲ್ಲಿ ಹೀಗಿಲ್ಲ ಮಾಡಿಕೊಂಡರೆ ಬಿ-ಫಾರಂ ಸಿಗಲ್ಲ ತಿಳ್ಕೋ ಎಂದು ಎಚ್ಚರಿಸಿದ್ದಾರೆನ್ನಲಾಗಿದೆ.

ಅಧಿಕಾರಿ ವಿರುದ್ಧ ದೂರು ನೀಡಲು ಹೋದಂತಹ ಶಿವಮೂರ್ತಿ ನಾಯ್ಕ್ ಸಿಎಂ ಆಕ್ರೋಶಗೊಂಡಿದ್ದನ್ನು ನೋಡಿ ಹಾಗಲ್ಲ ಸರ್, ಹೀಗೆ ಎಂದು ಹೇಳಿ ಮರು ಮಾತನಾಡದೆ ಜಾಗ ಖಾಲಿ ಮಾಡಿ ರಾತ್ರಿಯೇ ತಮ್ಮ ಸ್ವಕ್ಷೇತ್ರ ಮಾಯಕೊಂಡಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ತಮ್ಮ ಪುತ್ರ ಸೂರಜ್ ಎಸ್. ನಾಯ್ಕ್ ಅವರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನದುರ್ಗದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿಲ್ಲ ಎನ್ನುವ ಕಾರಣಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ ಅವರಿಗೆ ರಾಜೇಂದ್ರ ಕುಮಾರ್ ಕಟಾರಿಯಾ ದೂರು ಸಲ್ಲಿಸಿದ್ದರು.

ಅಕ್ಟೋಬರ್ 9ರಂದು ಕಚೇರಿಗೆ ನುಗ್ಗಿದ ಶಿವಮೂರ್ತಿ ನಾಯ್ಕ್ ತಕ್ಷಣವೇ ಕಡತ ತರಿಸಿ ಗಣಿಗಾರಿಕೆಗೆ ಅನುಮೋದನೆ ನೀಡಬೇಕೆಂದು ಒತ್ತಡ ಹೇರಿದರು. ನಾನೇ ಸರ್ಕಾರ. ನನ್ನ ಆದೇಶವನ್ನು ಪಾಲಿಸಲೇಬೇಕು ಎಂದು ಕೂಗಾಡಿದರು ಎಂದು ಕಟಾರಿಯಾ ದೂರಿನಲ್ಲಿ ತಿಳಿಸಿದ್ದಾರೆ.

 

Rajendra Kataria letter 1

Rajendra Kataria letter 2

Rajendra Kataria letter 3 1

Rajendra Kataria letter 4

Rajendra Kataria letter 5

Share This Article