ಕೋಲಾರ: ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಲಾಗಿದ್ದ ಸೇನೆಯ ಹೆಲಿಕಾಪ್ಟರ್ (IAF Helicopter) ರಿಪೇರಿಯಾದ ಬಳಿಕ ಸುರಕ್ಷಿತವಾಗಿ ಟೇಕಾಫ್ ಆಗಿ ಚೆನ್ನೈ ಕಡೆಗೆ ತೆರಳಿದೆ.
ಭಾನುವಾರ ಯಲಹಂಕದಿಂದ ಚೆನ್ನೈಗೆ ತೆರಳುತ್ತಿದ್ದ ವಾಯುಸೇನೆಯ (Indian Air Force) ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಬಳಿಕ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕರಪನಹಳ್ಳಿ ಕೆರೆಯ ಬಳಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.
ಈ ವಿಚಾರವನ್ನು ವಾಯುಪಡೆಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಬಳಿಕ ಸೇನೆಯ ಮತ್ತೊಂದು ಹೆಲಿಕಾಪ್ಟರ್ ಮೂಲಕ ಟೆಕ್ನಿಕಲ್ ತಂಡ ಸ್ಥಳಕ್ಕೆ ಆಗಮಿಸಿ, ಹೆಲಿಕಾಪ್ಟರ್‌ನ ತಾಂತ್ರಿಕ ದೋಷ ಸರಿಪಡಿಸಿದೆ. ಭದ್ರತೆಗಾಗಿ ವಾಯುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಹೆಲಿಕಾಪ್ಟರ್‌ನಲ್ಲಿ ಮೂವರು ವಾಯುಸೇನೆಯ ಪೈಲಟ್‍ಗಳು ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಮೂವರು ಸೇಫ್ ಆಗಿದ್ದರು. ಇದೀಗ 18 ಗಂಟೆಗಳ ಬಳಿಕ ಹೆಲಿಕಾಪ್ಟರ್ ರಿಪೇರಿಯಾಗಿದ್ದು, ಟೇಕಾಫ್ ಆಗಿದೆ.
ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ಸ್ಥಳದಲ್ಲಿ ಯಾವುದೇ ನಷ್ಟ ಇಲ್ಲ ಎಂದು ಪಂಚಾಯಿತಿ ವತಿಯಿಂದ ದೃಢಪಡಿಸಲಾಗಿದೆ.