ಬೆಳಗಾವಿ: ಹೊಸ ಸರ್ಕಾರದ ಹೊಸ ಬಜೆಟ್ ಮಾಡುವ ನಿರ್ಧಾರವನ್ನು ನಾನು ನಾನು ಬೆಂಬಲಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೆ ಕೂಡ ಹೊಸ ಸರ್ಕಾರ ಬಂದಾಗ ಬಜೆಟ್ ಮಂಡನೆ ಮಾಡಲಾಗಿತ್ತು. ಈಗ ಹೊಸ ಸರ್ಕಾರ ಬಂದಿದೆ. ಹೀಗಾಗಿ ಇವರು ಕೂಡ ಬಜೆಟ್ ಮಂಡನೆ ಮಾಡಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕಾರಣಕ್ಕೆ ಹೊಸ ಬಜೆಟ್ ಬೇಡಾ ಅಂದಿದ್ದಾರೆ ಗೊತ್ತಿಲ್ಲ ಎಂದರು.
ಅತೃಪ್ತರು ಸಭೆಗಳನ್ನ ಮಾಡಬಾರದು ಎಂದು ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ. ಹೀಗಾಗಿ ನಾವು ಸಭೆಗಳನ್ನ ಮಾಡುತ್ತಿಲ್ಲ, ವೈಯಕ್ತಿಕವಾಗಿ ಚರ್ಚೆ ಮಾಡುತ್ತಿದ್ದೇವೆ. ಈಗಾಗಲೇ ನಾನು ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಆದರೆ ರಾಜಿನಾಮೆ ಅಂಗೀಕಾರದ ಕುರಿತು ಯಾವುದೇ ಮಾಹಿತಿ ಇಲ್ಲ ಎಂದರು.
ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಇಲ್ಲವಾದರೆ ಮತ್ತೆ ಅತೃಪ್ತ ಶಾಸಕರು ಅಸಮಾಧಾನ ಏಳುವ ಸಾಧ್ಯತೆಯಿದೆ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಬೆಂಗಳೂರು ಚಲೋದಲ್ಲಿ ಭಾಗಿಯಾಗಲ್ಲ:
ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ತಮ್ಮ ಬೆಂಬಲಿಗರು ಹಾಗೂ ಮಾನವ ಬಂಧುತ್ವ ವೇದಿಕೆ ಮಂಗಳವಾರ ಬೆಂಗಳೂರು ಚಲೋ ಜಾಥಾ ಹಮ್ಮಿಕೊಂಡಿದ್ದು ಇದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಮಾನಮನಸ್ಕರು ನನಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ. ಬೆಂಗಳೂರು ಚಲೋ ಹಿನ್ನೆಲೆಯಲ್ಲಿ ಬುದ್ಧಿಜೀವಿಗಳು, ರಾಜ್ಯದ ವಿವಿಧ ಸಂಘಟನೆಗಳು ಹಾಗೂ ಬೆಂಬಲಿಗರು ಭಾಗಿಯಾಗಲಿದ್ದು, ಯಾವ ರೀತಿಯಾಗಿ ನಮಗೆ ಮತ್ತೆ ಸಮ್ಮಿಶ್ರ ಸರ್ಕಾರಕ್ಕೆ ಸಲಹೆ ನೀಡುತ್ತಾರೆ ನೋಡೋಣ ಎಂದರು.
ಪ್ರತಿಭಟನೆಗೆ ಮಣಿದು ಸರಕಾರ ಸಚಿವ ಸ್ಥಾನ ಈಗ ಕೊಟ್ಟರೂ ನನಗೆ ಬೇಡ. ಈಗಾಗಲೇ ಸಚಿವ ಸ್ಥಾನದಲ್ಲಿ ನಮ್ಮ ಕೋಟಾ ಮುಗಿದಿದೆ. ಹೀಗಾಗಿ ಎರಡು ವರ್ಷ ಕಾಯಬೇಕು ಎಂದು ಪಕ್ಷದಲ್ಲಿ ಹಿರಿಯರು ಹೇಳಿದ್ದಾರೆ. ಎರಡು ವರ್ಷದ ನಂತರ ಮತ್ತೆ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.