ಮಂಡ್ಯ: ಜನರಿಗಾಗಿ ನಾನು ಎರಡನೇ ಜನ್ಮ ಎತ್ತಿ ಬಂದಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಹೇಳಿದ್ದಾರೆ.
ನಿಖಿಲ್ ಗೌಡ ಮಂಡ್ಯದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲು ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತ, ನಾನು ಹುಟ್ಟಿದ್ದು ಹಾಸನದಲ್ಲಿ. ರಾಜಕೀಯವಾಗಿ ನನಗೆ ಜನ್ಮ ಕೊಟ್ಟಿದ್ದು ರಾಮನಗರದ ಜನತೆ. ರಾಜಕೀಯವಾಗಿ ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯದ ಜನತೆ. ಈ ಜನತೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ನಿಮ್ಮ ಬೆಂಬಲದಿಂದಲೇ 2004ರಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದೆ. ರಾಮನಗರದಲ್ಲಿ ವಿಧಾನಸಭೆ ಚುನಾವಣೆಗೆ ನಾನು ಒಂದು ದಿನ ಮತ ಕೇಳಲು ಹೋಗಿಲ್ಲ. ಅವರೇ ನನ್ನ ಮೇಲೆ ಪ್ರೀತಿ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯ ಋಣವನ್ನು ನಾನು ಹೃದಯದಲ್ಲಿಟ್ಟುಕೊಂಡಿದ್ದೇನೆ. ಅದನ್ನ ಜನ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಬಳಿಕ ನಾನು ಯಾವುದೇ ರಾಜಕೀಯ ಸ್ಥಾನಕ್ಕಾಗಿ ಮಂಡ್ಯಕ್ಕೆ ಬಂದಿಲ್ಲ. ಇಲ್ಲಿನ ಎಲ್ಲಾ ಜನರು ನನ್ನ ತಂದೆ ತಾಯಿಯರು. ಇಲ್ಲಿನ ಪ್ರತಿ ಯುವಕರ ಮನಸ್ಸನ್ನು ಗೆಲ್ಲಬೇಕು ಅಂತ ನಾನು ಇಲ್ಲಿಗೆ ಬಂದಿದ್ದೇನೆ. ನೀವು ನನಗೆ ಬೆಂಬಲಿಸಿದ್ದೀರ. ಜನರಿಗಾಗಿ ನಾನು ಮರು ಜನ್ಮ ಎತ್ತಿ ಬಂದಿದ್ದೇನೆ. ನನಗೆ ಅಧಿಕಾರಿ ನೀಡಿ ನನಗೆ ನೀವು ಮರು ಜನ್ಮ ಕೊಟ್ಟಿದ್ದೀರ. ನನಗೆ ಬೆಂಬಲ ನೀಡಿದಂತೆ ನನ್ನ ಮಗನಿಗೂ ಪ್ರೀತಿ ಬೆಂಬಲ ನೀಡಿ ಎಂದು ಮಂಡ್ಯ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ.
ನನ್ನ ಮಗ ನಿಖಿಲ್ ಕುಮಾರಸ್ವಾಮಿಯನ್ನ ಚುನಾವಣೆಗೆ ನಿಲ್ಲಿಸಬೇಕೆಂಬ ಯೋಚನೆಯೇ ನನಗಿರಲಿಲ್ಲ. ರವೀಂದ್ರ ಶ್ರೀಕಂಠಯ್ಯ ಅವರು ನಿಖಿಲ್ ಹೆಸರನ್ನು ಮೊದಲು ಹೇಳಿದ್ದು. ಅವರ ಮಾತು ಕೇಳಿ ನನಗೆ ನಡುಕ ಬಂತು. ಜನರ ಒತ್ತಾಯದ ಮೇಲೆ ನಿಖಿಲ್ ರಾಜಕೀಯಕ್ಕೆ ಕಾಲಿಟ್ಟಿದ್ದಾನೆ. ಜನರ ಸೇವೆ ಮಾಡಲು ಮಂಡ್ಯಕ್ಕೆ ಬಂದಿದ್ದಾನೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv