ಕಲಬುರಗಿ: ನಮ್ಮ ವಾಹನ ಚಾಲಕನ ಜೊತೆ ಹಲವರು ಸೇರಿ ರಸ್ತೆ ಅಪಘಾತದ ಮೂಲಕ ನನ್ನ ಕೊಲೆಗೆ ಸಂಚು ರೂಪಿಸಿಕೊಂಡಿದ್ದರು ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಆರೋಪಿಸಿದ್ದಾರೆ.
ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಅಭ್ಯರ್ಥಿಗಳೇ ಈ ಕೃತ್ಯದಲ್ಲಿ ಶಾಮಿಲಾಗಿರುವ ಬಗ್ಗೆ ಇದೀಗ ಬಿಜೆಪಿ ವಲಯದಲ್ಲಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಅಂದು ನಡೆದ ಅಪಘಾತದ ಬಗ್ಗೆ ಹಲವು ಅನುಮಾನಗಳಿವೆ, ಘಟನೆ ನಂತರ ನಮ್ಮ ಚಾಲಕ ವಿನಯ್ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಪಕ್ಷದ ಹೈಕಮಾಂಡ್‍ಗೆ ದೂರು ನೀಡಲಾಗುವುದು. ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾನೂನು ಹೋರಾಟ ಮಾಡಲಾಗುವುದು ಎಂದು ರೇವುನಾಯಕ ಕಲಬುರಗಿಯಲ್ಲಿ ಹೇಳಿಕೆ ನೀಡಿದರು.
ಮೇ 20 ರಂದು ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಬಳಿ ರೇವು ನಾಯಕ ಅವರ ಇನೋವಾ ಕಾರು, ಆಳಂದದಿಂದ ವಾಪಸ್ ಬರುತ್ತಿರುವಾಗ ಸೇತುವೆಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ರೇವುನಾಯಕ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಘಟನೆ ನಡೆದ ಸ್ಥಳದಲ್ಲಿ ಕಾರು ಅಪಘಾತವಾಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು. ಈ ಘಟನೆಯ ನಂತರ ಕಾರು ಚಾಲಕ ವಿನಯ್ ಸಹ ರೇವು ನಾಯಕ ಅವರ ಸಂಪರ್ಕ ಮಾಡದೆ ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
https://youtu.be/onSUc6jPqng