ಬುರ್ಖಾ ಧರಿಸದೆ, ಸಿಂಧೂರವಿಟ್ಟು, ಬಳೆ ತೊಟ್ಟಿದ್ದಕ್ಕೆ ಉತ್ತರಿಸಿದ ಸಂಸದೆ ನುಸ್ರತ್

Public TV
1 Min Read
nusrat oath app

ನವದೆಹಲಿ: ಬುರ್ಖಾ ಧರಿಸದೆ, ಹಣೆಗೆ ಸಿಂಧೂರ, ಕೈಗೆ ಬಳೆಯನ್ನಿಟ್ಟು ಸಂಸತ್ ಪ್ರವೇಶಿಸಿರುವುದನ್ನು ಟೀಕಿಸಿದವರಿಗೆ ನಟಿ, ಸಂಸದೆ ನುಸ್ರತ್ ಜಹಾನ್ ಅವರು ಸಂಸತ್‍ನಲ್ಲೇ ತಕ್ಕ ಉತ್ತರ ನೀಡಿದ್ದಾರೆ.

ಬುರ್ಖಾ ಧರಿಸದೆ ಸಂಸತ್ ಪ್ರವೇಶಿಸಿರುವುದು, ಸಿಂಧೂರ ಇಟ್ಟಿರುವುದು ಹಾಗೂ ಕೈಗೆ ಬಳೆ ತೊಟ್ಟಿದ್ದಕ್ಕೆ ಸಂಸದೆ ನುಸ್ರತ್ ಅವರನ್ನು ಮುಸ್ಲಿಂ ಧರ್ಮ ಗುರುಗಳು ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆ ಉತ್ತರಿಸಿರುವ ಸಂಸದೆ, ನಾನು ‘ಅಂತರ್ಗತ ಭಾರತ’ವನ್ನು ಪ್ರತಿನಿಧಿಸುತ್ತೇನೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ನಾನು ಜಾತಿ, ಮತ, ಧರ್ಮಗಳ ಹಂಗು ಮೀರಿದ ‘ಅಂತರ್ಗತ ಭಾರತ’ವನ್ನು ಪ್ರತಿನಿಧಿಸುತ್ತೇನೆ. ಅಲ್ಲದೆ ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಸಂಸತ್‍ನಲ್ಲಿ ಉತ್ತರಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೂ ಸಹ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನಾನು ಇನ್ನೂ ಮುಸ್ಲಿಂ ಧರ್ಮದಲ್ಲಿದ್ದೇನೆ. ಆದರೆ ನಾನು ಧರಿಸುವ ಉಡುಪಿನ ಕುರಿತು ಟೀಕಿಸುವ ಹಕ್ಕು ಯಾರಿಗೂ ಇಲ್ಲ. ನಂಬಿಕೆ ಉಡುಪುಗಳನ್ನು ಮೀರಿದ ವಿಷಯ. ಎಲ್ಲ ಧರ್ಮಗಳ ಅಮೂಲ್ಯವಾದ ಸಿದ್ಧಾಂತಗಳಲ್ಲಿ ನಂಬಿಕೆ ಇಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಜಹಾನ್ ಟೀಕಾಕಾರರನ್ನು ಕುಟುಕಿದ್ದಾರೆ.

nusrat 3

ನುಸ್ರತ್ ಜಹಾನ್ ಅವರು ಜೂನ್ 25ರಂದು ಸಂಸತ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಬುರ್ಖಾ ಧರಿಸಿರಲಿಲ್ಲ. ಹೀಗಾಗಿ ಮುಸ್ಲಿಂ ಗುರುಗಳು ಹಾಗೂ ಸಮುದಾಯದವರು ನುಸ್ರತ್ ವಿವಾಹದ ನಂತರ ಇಸ್ಲಾಮಿಕ್‍ಗೆ ವಿರುದ್ಧವಾದ ನಡೆಯನ್ನು ವ್ಯಾಪಕವಾಗಿ ಟೀಕಿಸಿದ್ದರು. ಅಲ್ಲದೆ, ಹೊಸದಾಗಿ ಮದುವೆಯಾಗಿದ್ದ ಸಂಸದೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು.

nusrat jahan 1

ಜಹಾನ್ ಅವರು ಜೂನ್ 19ರಂದು ಉದ್ಯಮಿ ನಿಖಿಲ್ ಜೈನ್ ಅವರನ್ನು ವಿವಾಹವಾಗಿದ್ದಾರೆ. ವಿವಾಹದ ವೇಳೆಯೂ ನುಸ್ರತ್ ಅವರು ಮುಸ್ಲಿಂ ಸಂಪ್ರದಾಯದಂತೆ ಬುರ್ಖಾ ಧರಿಸದಿರುವುದು, ಹಣೆಗೆ ಕುಂಕುಮ, ಕೈಗೆ ಬಳೆ ತೊಟ್ಟಿದ್ದರು. ಅವರ ನಡೆಯನ್ನು ಪ್ರಶ್ನಿಸಿ ಹಲವಾರು ಮುಸ್ಲಿಂ ಧರ್ಮ ಗುರುಗಳು ಹಾಗೂ ನಾಯಕರು ಪ್ರಶ್ನಿಸಿದ್ದರು. ಇದಕ್ಕೆ ನುಸ್ರತ್ ಅವರು ಸಂಸತ್‍ನಲ್ಲಿ ಹಾಗೂ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *