ಬೆಂಗಳೂರು: ಪರಪ್ಪನ ಅಗ್ರಹಾರ(Parappana Agrahara) ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಸ್ಪಷ್ಟಪಡಿಸಿದ್ದಾರೆ.
ರೇಡ್ ವೇಳೆ ಪ್ರಜ್ವಲ್ ರೇವಣ್ಣ(Prajwal Revanna) ಬ್ಯಾರಕ್‌ನಲ್ಲಿ ಮೊಬೈಲ್ ಸಿಕ್ಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಸಿಬಿ ರೇಡ್ (CCB Raid) ಮಾಡಿಸಿದ್ದು ನಾನೇ. ರೇಡ್ ಆಗಬೇಕಾದರೂ ಗೃಹ ಇಲಾಖೆಯ ಅನುಮತಿ ಬೇಕು. ಎರಡು ವಾರದ ಹಿಂದೆ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿದ್ದೆ. ಅಲ್ಲಿ ಕೆಲವು ಲೋಪಗಳಾಗಿದ್ದವು. ಹೀಗಾಗಿ ಮುಖ್ಯಮಂತ್ರಿಗಳ ಅನುಮತಿ ಪಡೆದು ರೇಡ್ ಮಾಡಿಸಿದೆ ಎಂದು ತಿಳಿಸಿದರು.
ಅಧಿಕಾರಿಗಳ ಮಾಹಿತಿ ಮೇರೆಗೆ ರೇಡ್ ಮಾಡಿಸಿದ್ದೇನೆ. ಈ ಅಕ್ರಮಕ್ಕೆ ಸಹಕಾರ ಕೊಟ್ಟ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಪರಪ್ಪನ ಅಗ್ರಹಾರ ಮಾತ್ರವಲ್ಲ, ರಾಜ್ಯದ ಎಲ್ಲಾ ಕಾರಾಗೃಹಗಳ ಮೇಲೆಯೂ ಇಂತಹ ಕಾರ್ಯಾಚರಣೆ ನಡೆಯುತ್ತದೆ. ಇದನ್ನು ನಿರಂತರವಾಗಿ ಮಾಡಬೇಕು. ಕೆಲವು ಅಧಿಕಾರಿಗಳು ಇದ್ದಾರೆ, ಅವರು ತಮ್ಮ ಹಳೆ ಚಾಳಿಯನ್ನು ಬಿಟ್ಟಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಇಂತಹ ಕೆಲಸಗಳು ಯಾವಾಗಲೂ ಆಗುತ್ತಿರುತ್ತವೆ, ಹಾಗಂತ ತಕ್ಷಣ ನೇಣಿಗೆ ಹಾಕಲು ಆಗುವುದಿಲ್ಲ. ನಾನು ಖಾತೆ ತೆಗೆದುಕೊಂಡು 2 ತಿಂಗಳಲ್ಲಿ ಇಷ್ಟು ಬೇಗ ರೇಡ್ ಮಾಡಿಸಿ ಕ್ರಮ ಕೈಗೊಂಡಿದ್ದೇನೆ. ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಹಾಗೂ ಸರ್ವೀಸ್ ಡಿಸ್ಮಿಸ್ ಮಾಡಲು ಕೆಲವು ಮಾನದಂಡಗಳಿವೆ, ಅದರ ಪ್ರಕಾರವೇ ನಾವು ಕೆಲಸ ಮಾಡಬೇಕಾಗುತ್ತದೆ ಎಂದರು. ಇದನ್ನೂ ಓದಿ: ಜೈಲಲ್ಲಿ ಮೊಬೈಲ್ ಪತ್ತೆ | ಪ್ರಜ್ವಲ್ ರೇವಣ್ಣ ವಿರುದ್ಧ FIR – ಸಿಸಿಬಿ ಇನ್ಸ್‌ಪೆಕ್ಟರ್ ನೀಡಿದ ದೂರಿನಲ್ಲೇನಿದೆ?
ವಿಐಪಿ ಟ್ರೀಟ್‌ಮೆಂಟ್ ಯಾರಿಗೂ ಕೊಡಬಾರದು. ರೇಡ್‌ನಲ್ಲಿ ಏನೇನು ಸಿಕ್ಕಿದೆ ಎಂದು ಇಲ್ಲಿ ಚರ್ಚೆ ಮಾಡಲು ಆಗುವುದಿಲ್ಲ. ಈ ದಾಳಿಯೇ ಅಧಿಕಾರಿಗಳಿಗೆ ಒಂದು ಸೂಚನೆ. ಪ್ರಸ್ತುತ ಮಹಜರು ಪ್ರಕ್ರಿಯೆ ನಡೆಯಬೇಕು, ಅದೆಲ್ಲವೂ ಮುಗಿಯಲಿ. ಈ ವಸ್ತುಗಳು ಯಾರಿಂದ ಒಳಗೆ ಹೋದವು ಮತ್ತು ಯಾರ ಸಹಕಾರವಿತ್ತು ಎಂಬ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು” ಎಂದು ಹೇಳಿದರು. ಇದನ್ನೂ ಓದಿ: ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ
ನಾಗೇಂದ್ರ ವಿರುದ್ದ ಸದನದಲ್ಲಿ ಬಿಜೆಪಿ ಪ್ರತಿಭಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ಹೇಳಿಕೆ ನೋಡಿದ್ದೇನೆ. ವಿಜಯೇಂದ್ರ ಮೊದಲು ಯತ್ನಾಳ್ ಮಾತು ಕೇಳಲಿ. ಯತ್ನಾಳ್ ಏನ್ ಹೇಳಿದ್ದಾರೆ. ನೈತಿಕತೆ ಇದ್ದರೆ ಬಿಜೆಪಿ ಅವರು ವೇದಿಕೆ ಹತ್ತಬಾರದು. ನಾಗೇಂದ್ರ ಅವರ ವಿಚಾರದಲ್ಲಿ ನೈತಿಕತೆ ಮಾತನಾಡುವ ಬಿಜೆಪಿ ನಾಯಕರು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮೇಲಿರುವ ಪೋಕ್ಸೋ (POCSO) ಪ್ರಕರಣದ ಬಗ್ಗೆ ಮೊದಲು ಉತ್ತರಿಸಲಿ ಎಂದು ಸವಾಲು ಎಸೆದರು.
ಜೆಪಿಯ ಹಲವು ಶಾಸಕರ ಮೇಲೆ ದೌರ್ಜನ್ಯ ಹಾಗೂ ಅಟ್ರಾಸಿಟಿ ಪ್ರಕರಣಗಳಿವೆ. ಬಿಜೆಪಿ ನಾಯಕರು ಇತರರ ಬೆಟ್ಟು ಮಾಡಿ ತೋರಿಸುವ ಮೊದಲು ತಮ್ಮ ಮೇಲೆ ಎಷ್ಟೆಷ್ಟು ಪ್ರಕರಣಗಳಿವೆ ಎಂಬುದರ ಕುರಿತು ಸ್ವಯಂ ಸಮೀಕ್ಷೆ ಮಾಡಿಕೊಳ್ಳಲಿ. ಸಿಬಿಐ, ಅಥವಾ ಆದಾಯ ತೆರಿಗೆ ಇಲಾಖೆಗಳು ಕೇವಲ ಆರೋಪ ಮಾಡಿದ ತಕ್ಷಣವೇ ಯಾರೂ ತಪ್ಪಿತಸ್ಥರಾಗುವುದಿಲ್ಲ. ವಿಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಈ ರೀತಿ ಆರೋಪ ಮಾಡುತ್ತಿವೆ ಎಂದು ತಿರುಗೇಟು ನೀಡಿದರು.

