ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದ ಟ್ರೈಲರ್ ಹೊರಬಂದಿದೆ. ಕಿಚ್ಚ ಸುದೀಪ್ ಬಿಡುಗಡೆಗೊಳಿಸಿರೋ ಈ ಟ್ರೈಲರ್ ಮೂಲಕ ದಶಕದ ಹಿಂದೆ ಹುಚ್ಚೆಬ್ಬಿಸಿದ್ದ ಉಪ್ಪಿ ಮತ್ತೆ ಹೊಸ ರೂಪದಲ್ಲಿ ಎದ್ದುಬಂದಂಥಾ ಅನುಭವವಾಗಿ ಸಮಸ್ತ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ. ಈ ಟ್ರೈಲರಿನಲ್ಲಿ ಉಪೇಂದ್ರ ಕಾಣಿಸಿಕೊಂಡಿರೋ ಗೆಟಪ್, ಪ್ರೀತಿ ಪ್ರೇಮಗಳ ಬಗೆಗಿನ ಬಿಡಬೀಸಾದ ಡೈಲಾಗುಗಳೆಲ್ಲವೂ ಆ ಕಾಲದ ಉಪ್ಪಿ ಎದ್ದು ಬಂದು ಐ ಲವ್ ಯೂ ಅಂದಂತೆ ಭಾಸವಾದರೆ ಯಾವ ಅಚ್ಚರಿಯೂ ಇಲ್ಲ!
ಕಿಚ್ಚ ಸುದೀಪ್ ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಅವರೆಡೆಗಿನ ಪ್ರೀತಿಯಿಂದಲೇ ಐ ಲವ್ ಯೂ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. ಉಪ್ಪಿ ಹಾಗೂ ಚಂದ್ರು ಕಾಂಬಿನೇಷನ್ನಿಗೆ ಮತ್ತೊಂದು ಮಹಾ ಗೆಲುವು ಸಿಗಲೆಂಬ ಆಶಯದ ಮಾತುಗಳನ್ನೂ ಆಡಿದ್ದಾರೆ. ಹೀಗೆ ಸುದೀಪ್ ಅವರು ಬಿಡುಗಡೆಗೊಳಿಸಿದ ಈ ಟ್ರೈಲರ್ ಗಂಟೆಗಳು ಕಳೆಯೋದರೊಳಗಾಗಿ ಯೂಟ್ಯೂಬ್‍ನಲ್ಲಿ ವ್ಯಾಪಕ ವೀಕ್ಷಣೆ ಹಾಗೂ ಮೆಚ್ಚುಗೆ ಪಡೆದುಕೊಂಡಿದೆ. ಉಪ್ಪಿ ಅಭಿಮಾನಿಗಳ ಪಾಲಿಗಂತೂ ಈ ಟ್ರೈಲರ್ ಹಬ್ಬದಂತಾಗಿ ಬಿಟ್ಟಿದೆ.
Advertisement
Advertisement
ಅಷ್ಟರ ಮಟ್ಟಿಗೆ ಆರ್ ಚಂದ್ರು ಅವರ ಪರಿಶ್ರಮ ಮತ್ತು ಕನಸಿಗೆ ಆರಂಭಕವಾಗಿಯೇ ಯಶ ಸಿಕ್ಕಂತಾಗಿದೆ. ನವಿರಾದ ಪ್ರೇಮ ಕಥಾನಕಗಳನ್ನು ದೃಶ್ಯ ರೂಪಕ್ಕಿಳಿಸುತ್ತಲೇ ಪ್ರೇಕ್ಷಕರನ್ನು ಆವರಿಸಿಕೊಂಡು ಗೆದ್ದಿರುವವರು ಆರ್.ಚಂದ್ರು. ಅವರಿಗೆ ಪ್ರೇಮವೆಂಬ ಅಯಸ್ಕಾಂತವನ್ನು ಯಾವ್ಯಾವ ಆಂಗಲ್ಲುಗಳಲ್ಲಿ ಬಳಸಬಹುದೆಂಬ ಕಲೆಗಾರಿಕೆ ಬೇಷರತ್ತಾಗಿಯೇ ಒಲಿದಿದೆ. ಐ ಲವ್ ಯೂ ಚಿತ್ರದಲ್ಲಿಯಂತೂ ಚಂದ್ರು ಅವರು ಉಪ್ಪಿ ಹಳೇ ಇಮೇಜಿಗೆ ತಕ್ಕಂಥಾದ್ದೇ ಕಥೆಯೊಂದನ್ನು ದೃಷ್ಯೀಕರಿಸಿರೋ ಸೂಚನೆ ಈ ಟ್ರೈಲರ್ ಮೂಲಕವೇ ಸಿಕ್ಕಿದೆ.
Advertisement
ಪ್ರೀತಿ ಪ್ರೇಮಗಳಾಚೆಗೆ ಮನಮಿಡಿಯುವಂಥಾ ಸೆಂಟಿಮೆಂಟ್ ಸ್ಟೋರಿಯನ್ನೂ ಕೂಡಾ ಐ ಲವ್ ಯೂ ಚಿತ್ರ ಒಳಗೊಂಡಿರೋದರ ಝಲಕ್ಕುಗಳೂ ಕೂಡಾ ಈ ಟ್ರೈಲರ್ ಮೂಲಕವೇ ಅನಾವರಣಗೊಂಡಿದೆ. ಒಟ್ಟಾರೆಯಾಗಿ ಈ ಟ್ರೈಲರ್ ಬಿಡುಗಡೆಯಾಗಿ ಘಂಟೆಗಳು ಕಳೆಯೋದರೊಳಗಾಗಿಯೇ ಜನರನ್ನು ಸೆಳೆದಿದೆ. ಬೇಗನೆ ಇದರ ವೀಕ್ಷಣೆ ಲಕ್ಷದ ಗಡಿ ದಾಟಿ ಯೂಟ್ಯೂಬ್ ಟ್ರೆಂಡಿಂಗ್‍ನತ್ತ ದಾಪುಗಾಲಿಡುತ್ತಿದೆ. ಇದು ಚಿತ್ರತಂಡಕ್ಕೂ ಹೊಸಾ ಖುಷಿ, ಹುಮ್ಮಸ್ಸು ತುಂಬಿದೆ.
Advertisement
ರಚಿತಾ ರಾಮ್ ಮತ್ತು ಸೋನು ಗೌಡ ಉಪೇಂದ್ರರಿಗೆ ನಾಯಕಿಯರಾಗಿ ನಟಿಸಿರೋ ಈ ಚಿತ್ರ ಜೂನ್ 14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶನ ಮಾಡಿರೋದು ಮಾತ್ರವಲ್ಲದೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಗಣೇಶ್, ವಿನೋದ್ ಮತ್ತು ಕೆ ರವಿವರ್ಮಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.