ಬೆಂಗಳೂರು: ಪತಿ, ಮಾಜಿ ಸಚಿವ ಅಂಬರೀಶ್ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲ ಬೇಕಿತ್ತಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದರು. ಈಗ ಈ ಹೇಳಿಕೆಯನ್ನು ರೇವಣ್ಣ ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ರೇವಣ್ಣ ಅವರು, ನಾನು ಸುಮಲತಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ದುರುದ್ದೇಶದಿಂದ ಈ ರೀತಿ ಹೇಳಿಲ್ಲ. ಅವರು ಆ ರೀತಿ ಬರುವುದು ಏಕೆ ಎಂದು ಹೇಳಿದ್ದು ಅಷ್ಟೇ. ಹಿಂದೂ ಸಂಸ್ಕೃತಿ ಬಗ್ಗೆ ಹೇಳಿದೆ ಅಷ್ಟೇ. ಹಾಗಾಂತ ಅವರು ರಾಜಕೀಯಕ್ಕೆ ಬರುವುದು ಬೇಡ ಎಂದು ನಾನು ಹೇಳಿಲ್ಲ. ರಾಜಕೀಯಕ್ಕೆ ಬರುವುದಕ್ಕೆ ಎಲ್ಲರೂ ಸ್ವತಂತ್ರರು. ಅವರು ಚುನಾವಣೆಗೆ ನಿಲ್ಲುತ್ತಾರೋ ಅಥವಾ ಇಲ್ಲವೋ ಅದು ಅವರಿಷ್ಟ ಎಂದು ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ
ಕೆಟ್ಟ ಉದ್ದೇಶದಿಂದ ನಾನು ಈ ಹೇಳಿಕೆಯನ್ನು ನೀಡಿಲ್ಲ. ರಾಜಕೀಯಕ್ಕೆ ಎಂಟ್ರಿ ಕೊಡೋದು ಬಿಡೋದು ಅವರ ಇಷ್ಟ. ನಾನು ಅವರನ್ನು ಬೈದಿಲ್ಲ. ಅವರಿಗೆ ನಾನು ಏಕೆ ಬೈಯಬೇಕು. ಅಲ್ಲದೇ ಅವರು ಮಂಡ್ಯದಿಂದ ನಿಲ್ಲುತ್ತೇನೆ ಎಂದು ಅವರೇ ಸ್ವತಃ ಹೇಳಿದ್ದಾರೆ.
ಸಚಿವ ರೇವಣ್ಣ ಅಂಬರೀಶ್ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲ ಬೇಕಿತ್ತಾ. ಸಿಎಂ ಕುಮಾರಸ್ವಾಮಿ ಅವರು ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಟ್ಟರು. ಆದರೆ ಸುಮಲತಾ ಅವರಿಗೆ ಯಾವುದೇ ಕೃತಜ್ಞತೆಯೂ ಇಲ್ಲ. ಸುಮಲತಾ ಅವರು ಚಾಲೆಂಜ್ ಮಾಡುತ್ತಿದ್ದಾರೆ. ಇದನ್ನ ನಾವು ಎದುರಿಸಲು ಸಿದ್ಧರಾಗಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv