ಬೆಂಗಳೂರೂ: ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವೀಡಿಯೋ ವೈರಲ್ ಪ್ರಕರಣದ ಕುರಿತು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯೆ ನೀಡಿದ್ದು, ನಾನಾಗಲಿ, ಹೆಚ್‌ಡಿ ದೇವೇಗೌಡರಾಗಲಿ ಈ ರೀತಿಯ ಕೆಲಸ ಮಾಡಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಕೇಸ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಎಸ್‌ಐಟಿ (SIT) ತನಿಖೆಗೆ ಆದೇಶ ನೀಡಿದ್ದಾರೆ ಎಂದು ಗಮನಿಸಿದ್ದೇನೆ. ಹಾಸನ ಚುನಾವಣಾ ಪ್ರಚಾರ ವೇಳೆ ಪ್ರಕರಣ ಆರಂಭವಾಗಿದೆ. ವಾಸ್ತವಾಂಶ ಹೊರಬರಲಿ. ತನಿಖೆ ಆದಮೇಲೆ ಸತ್ಯಾಸತ್ಯತೆ ಹೊರ ಬರಲಿದೆ. ನೆಲದ ಕಾನೂನಲ್ಲಿ ತಪ್ಪು ಮಾಡಿದವನು, ಉಪ್ಪು ತಿಂದವನು ನೀರು ಕುಡಿಯಲೇಬೇಕು. ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದಿಲ್ಲ. ಹೀಗಾಗಿ ತನಿಖೆ ವರದಿ ಬರಲಿ. ಬಂದಮೇಲೆ ಮಾತನಾಡುತ್ತೇನೆ. ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ. ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳನ್ನು ನೇಮಿಸಿದ್ದಾರೆ. ವಿದೇಶಕ್ಕೆ ಹೋಗಿದ್ದರೆ ಕರೆದುಕೊಂಡು ಬರುವ ಜವಾಬ್ದಾರಿ ಅವರದ್ದು, ನಾನು ಉತ್ತರಿಸಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಯಿಂದ ಜನ ಬದುಕ್ತಿದ್ದಾರೆ: ಡಿಕೆಶಿ
ಬರ ಪರಿಹಾರ (Drought Relief) ವಿಚಾರಕ್ಕೆ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಬರ ಪರಿಹಾರ ಕೇಳಿದ್ದು 18,000 ಕೋಟಿ ಅಲ್ಲ. ಸರ್ಕಾರ ಕೇಳಿದ್ದು 4,800 ಕೋಟಿ. ಎನ್‌ಡಿಆರ್‌ಎಫ್ ಆ್ಯಕ್ಟ್ ಅಡಿಯಲ್ಲಿ ಇರೋದು ಕೊಟ್ಟರೆ ಸಾಕು ಅಂತ ಕೇಳಿದ್ದರು. ಇದು ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಗೂಬೆ ಕೂರಿಸೋ ಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾವು ಗ್ಯಾರಂಟಿಗೆ ಹಣ ಕೇಳಿಲ್ಲ, ಕೇಳೋದು ಇಲ್ಲ – ರೈತರಿಗಾಗಿ ಹಣ ಕೇಳಿದ್ವಿ: ಬಿಜೆಪಿ ವಿರುದ್ಧ ಸಿಎಂ ಕಿಡಿ
ನನಗಿರುವ ಮಾಹಿತಿ ಪ್ರಕಾರ 2004/2013 ರವರೆಗೆ ಎನ್‌ಡಿಆರ್‌ಎಫ್‌ನಿಂದ (NDRF) ಬರಗಾಲದ ಸಂದರ್ಭದಲ್ಲಿ ಕೊಟ್ಟಿದ್ದು ಬರೇ 8% ಮಾತ್ರ. ಮೋದಿ ಪ್ರಧಾನಿ ಆದಾಗಿನಿಂದ ಇಲ್ಲಿಯವರೆಗೆ 8 ವರ್ಷಕ್ಕೆ 38% ಕೊಟ್ಟಿದ್ದಾರೆ. ಇದು ನರೇಂದ್ರ ಮೋದಿ ಸರ್ಕಾರ ಕೊಟ್ಟಿರುವುದು. ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಯೋಗ್ಯತೆಗೆ ಮೊದಲು ಕೊಡೋ ಹಣವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Prajwal Revanna Case: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಕೆಲವೇ ಹೊತ್ತಲ್ಲಿ ಎಸ್‌ಐಟಿ ರಚನೆ: ಪರಮೇಶ್ವರ್
ಇಂದು ಹೊಸಪೇಟೆಯಲ್ಲಿ ಮೋದಿ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದೇನೆ. ಪ್ರಧಾನಿಯವರು ಎಲ್ಲೆಲ್ಲಿ ರ‍್ಯಾಲಿ ಮಾಡುತ್ತಾರೋ ಅಲ್ಲೆಲ್ಲ ನಾನು ಭಾಗವಹಿಸುತ್ತೇನೆ. ನಾಳೆ ಶಿವಮೊಗ್ಗದಲ್ಲಿ ಮೂರು ಕಡೆ ಸಭೆ ಇದೆ. ಬಳಿಕ ಕೋರ್ ಕಮಿಟಿ ಸಭೆ ಇದೆ. ಮೇ 1ರಿಂದ 5ರವರೆಗೆ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಪ್ರವಾಸ ಮಾಡಲಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮತದಾನ ಮುಗಿದ ಬೆನ್ನಲ್ಲೇ ಜರ್ಮನಿಗೆ ಹಾರಿದ ಪ್ರಜ್ವಲ್ ರೇವಣ್ಣ