ಬೆಂಗಳೂರು: ಮೈತ್ರಿ ಸರ್ಕಾರದ ನೂತನ ಸಚಿವ ಸಂಪುಟದ ಸದಸ್ಯರಾಗಿ ಇಂದು ರಾಣಿಬೆನ್ನೂರಿನ ಶಾಸಕ ಆರ್.ಶಂಕರ್ ಅವರು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಈ ಕುರಿತು ಶಂಕರ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ಈ ಹಿಂದೆ ಕೂಡ ಹೇಳಿದ್ದೆ ಸಚಿವ ಸ್ಥಾನ ಎಂಬುದು ಒಂದು ಜವಾಬ್ದಾರಿಯಾಗಿದೆ. ಅದನ್ನು ತಾಲೂಕಿನ ಜನರಿಗೆ ಮತ್ತು ಈ ನಾಡಿಗೆ ನನ್ನ ಇಲಾಖೆ ವತಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವುದು ನನ್ನ ಬಯಕೆಯಾಗಿದೆ. ನನ್ನ ಜೊತೆ ಕಾಂಗ್ರೆಸ್ ನವರು ಮಾತಾಡಿಯೇ ನನಗೆ ಸಚಿವ ಸ್ಥಾನ ಕೊಟ್ಟಿರುವುದು. ನಾನು ಕಾಂಗ್ರೆಸ್ ಸೇರುತ್ತೇನೆ ಎಂದರು.
ಬ್ಲಾಕ್‍ಮೇಲ್ ತಂತ್ರವನ್ನು ಉಪಯೋಗಿಸಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದಿದ್ದ ಕೋಳಿವಾಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೋಳಿವಾಡ ಅವರು ಸ್ಪೀಕರ್ ಆಗಿದ್ದಾಗ ಮಾಡಿರುವ ಕಿತಾಪತಿಗಳು ಜನರಿಗೆ ಗೊತ್ತಿದೆ. ವಿಶೇಷವಾಗಿ ನಮ್ಮ ತಾಲೂಕಿನ ಜನತೆಗೆ ಅವರ ಬಗ್ಗೆ ತಿಳಿದಿದೆ. ಬ್ಲಾಕ್‍ಮೇಲ್ ತಂತ್ರ ನಾನು ಮಾಡಿಲ್ಲ. ಕೆ.ಬಿ ಕೋಳಿವಾಡ ಅವರು ದೆಹಲಿಗೆ ಹೋಗಿ ಲಾಭಿ ಮಾಡಿರುವುದು, ಶಾಸಕರನ್ನ ಎತ್ತಿಕಟ್ಟಿಕೊಂಡು ಮಾಡಿರುವ ಉದಾಹರಣೆಗಳು ಇವೆ. ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದು, ನನ್ನ ಹಕ್ಕನ್ನು ನಾನು ಪ್ರತಿಪಾದನೆ ಮಾಡಿದ್ದೇನೆ. ನಾನು ಯಾವ ಬ್ಲಾಕ್‍ಮೇಲ್ ತಂತ್ರ ಅಳವಡಿಸಿ ಸಚಿವ ಸ್ಥಾನ ಪಡೆದಿಲ್ಲ. ನನ್ನ ಹಕ್ಕನ್ನು ನಾನು ಕೇಳಿದ್ದೇನೆ ಎಂದು ಕೋಳಿವಾಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ನಾನು ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೇನೆ. ನಾನು ಕಳೆದ ಬಾರಿ ಸಚಿವ ಸ್ಥಾನ ಕಳೆದು ಕೊಳ್ಳುವುದಕ್ಕೆ ಯಾವ ತಪ್ಪು ಮಾಡಿಲ್ಲ. ಕೆಲವು ಗೊಂದಲಗಳು ಆಗಿರಬಹುದು ಇಲ್ಲ ಅಂತಲ್ಲ. ಹಾಗಂತ ನಾನು ಸ್ಥಾನ ಕಳೆದುಕೊಂಡ ಮೇಲೆ ಬೇರೆ ಪಕ್ಷಕ್ಕೆ ಹೋಗುತ್ತೇನೆ ಅನ್ನೋದು ಸುಳ್ಳು. ಕಾಂಗ್ರೆಸ್ ಅಸಮಾಧಾನಿತ ಶಾಸಕರು ಅಂದುಕೊಂಡಂತೆ ಇರಲ್ಲ ನಿಯತ್ತಾಗಿ ಇರುತ್ತೇನೆ. ನನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದೇನೆ. ಯಾವ ಬ್ಲಾಕ್‍ಮೇಲ್ ಮಾಡಿಲ್ಲ. ಈಗ ಸರ್ಕಾರಕ್ಕೆ ನನ್ನ ಬೆಂಬಲ ಬೇಕಾಗಿದೆ. ಹೀಗಾಗಿ ನಾನು ಸರ್ಕಾರದ ಜೊತೆ ಕೆಲಸ ಮಾಡುತ್ತೇನೆ. ಖಾಲಿ ಇರುವ ಖಾತೆ ಕೊಡುತ್ತೀನಿ ಎಂದು ಹೇಳಿದ್ದಾರೆ ನೋಡೋಣ ಎಂದು ಆರ್.ಶಂಕರ್ ಹೇಳಿದ್ದಾರೆ.