ಮುಂಬೈ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ನನ್ನ ತಂದೆಯನ್ನೇ ಕಳೆದುಕೊಂಡಂತಾಗಿದೆ ಎಂದು ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಭಾರತದ ನೈಟಿಂಗೇಲ್ ಎಂದೇ ಹೆಸರು ಪಡೆದಿರುವ ಲತಾ ಮಂಗೇಶ್ಕರ್ ತಿಳಿಸಿದ್ದಾರೆ.
ಅಟಲ್ ಜಿಯವರ ಅಗಲಿಕೆಗೆ ಕಂಬನಿ ಮಿಡಿದ ಅವರು, ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಟಲ್ ಜೀಯವರು ನನ್ನನ್ನು ಯಾವಾಗಲೂ ಭೇಟಿ ಎಂದೇ ಕರೆಯುತ್ತಿದ್ದರು. ನಾನೂ ಕೂಡ ಅವರನ್ನು ದಾದಾ ಎಂದೇ ಕರೆಯುತ್ತಿದ್ದೆ. ಅವರ ಅಗಲಿಕೆಯಿಂದ ನನ್ನ ತಂದೆಯನ್ನೇ ಮತ್ತೊಮ್ಮೆ ಕಳೆದುಕೊಂಡ ರೀತಿ ನನಗೆ ನೋವುಂಟಾಗಿದೆ ಎಂದು ಭಾವುಕರಾದ್ರು.
ನಮ್ಮ ತಂದೆ ಪಂಡಿತ್ ದಿನನಾಥ್ ಮಂಗೇಶ್ಕರ್ ರೊಂದಿಗೆ ಅವರು ಹೆಚ್ಚಿನ ಒಡನಾಟವನ್ನು ಹೊಂದಿದ್ದರು. ಅಟಲ್ ಜಿ ನಮ್ಮ ಮನೆಗೆ ಹಲವು ಬಾರಿ ಬಂದಿದ್ದರು. ಆವಾಗಿನಿಂದಲೂ ನಾನು ಅವರಿಗೆ ಹೆಚ್ಚು ಹತ್ತಿರದಲ್ಲಿದ್ದೆನೆ. ಪೂಣೆಯಲ್ಲಿ ದಿನನಾತ್ ಮಂಗೇಶ್ವರ್ ಹೆಸರಿನಲ್ಲಿ ನಿರ್ಮಿಸಿದ್ದ ಆಸ್ಪತ್ರೆಯನ್ನು ಉದ್ಘಾಟನೆಗೆ ಕರೆದಾಗ ಅವರು ಆತ್ಮೀಯವಾಗಿ ಬಂದು ಉದ್ಘಾಟನೆಯನ್ನು ನೆರವೇರಿಸಿದ್ದರು.
2014 ರಲ್ಲಿ ಅವರು ಬರೆದ ಎಲ್ಲಾ ಕವಿತೆಗಳನ್ನು ಅಂತರ್ನಾದ್ ಎಂಬ ಶೀರ್ಷಿಕೆಯಲ್ಲಿ ಸಂಗೀತದ ಆಲ್ಬಂ ಆಗಿ ಸಿದ್ಧಪಡಿಸಿದ್ದೆವು. ಅದನ್ನು ನವದೆಹಲಿಯಲ್ಲಿರುವ ಅವರ ಮನೆಯಲ್ಲಿ ಬಿಡುಗಡೆ ಮಾಡಿದ್ದೆವು. ಅದಕ್ಕೆ ಅವರು ಅಪಾರ ಸಂತೋಷವನ್ನು ವ್ಯಕ್ತಪಡಿಸಿದ್ದರು ಎಂದು ಅಟಲ್‍ಜಿ ಯವರ ಒಡನಾಟವನ್ನು ನೆನಪಿಸಿಕೊಂಡರು.
ದೇಶ ಭಾರತ ರತ್ನಕ್ಕಿಂತಲೂ ಹೆಚ್ಚಿರುವ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv