ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐಗೆ ವಹಿಸುವಂತೆ ನಾನು ಹೇಳಿಲ್ಲ- ಸಿದ್ದರಾಮಯ್ಯ

Public TV
2 Min Read
siddaramaiah 2

ಬಾಗಲಕೋಟೆ: ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ನಾನು ಹೇಳಿಲ್ಲ. ತನಿಖೆಯಾಗಬೇಕೆಂದು ಮಾತ್ರ ಹೇಳಿದ್ದೆ ಆದರೆ, ಇಂತಹದ್ದೇ ಸಂಸ್ಥೆಗೆ ನೀಡಬೇಕೆಂದು ಹೇಳಿರಲಿಲ್ಲ. ಯಡಿಯೂರಪ್ಪನವರು ಯಾವ ಕಾರಣಕ್ಕೆ ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

CM BSY

ಜಿಲ್ಲೆಯ ಬಾದಾಮಿ ತಾಲೂಕಿನ ಬೀರನೂರು ಗ್ರಾಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ನನ್ನ ಸಲಹೆ ಮೇರೆಗೆ ಫೋನ್ ಟ್ಯಾಪಿಂಗ್ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಿದ್ದೇ ಆದಲ್ಲಿ, ಇದೀಗ ನಾನು ಒಂದು ಸಲಹೆ ನೀಡುತ್ತೇನೆ. ಇಡೀ ಆಪರೇಶನ್ ಕಮಲದ ಎಪಿಸೋಡ್ ಸಿಬಿಐ ತನಿಖೆಗೆ ವಹಿಸಲಿ. ವರ್ಗಾವಣೆ ದಂಧೆಗೆ ಯಡಿಯೂರಪ್ಪ ತಮ್ಮ ಮಗನನ್ನೇ ಬಿಟ್ಟಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಸಿದ್ದರಾಮಯ್ಯನವರು, ಈ ಕುರಿತು ಅವರನ್ನೇ ಕೇಳಿ ಎಂದು ಉತ್ತರಿಸಲು ನಿರಾಕರಿಸಿದರು.

ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಇನ್ನೂ ಪರಿಹಾರ ಘೋಷಣೆ ಮಾಡಿಲ್ಲ. ಮೋದಿಯವರಿಗೆ ಕಣ್ಣು ಬಾಯಿ ಇಲ್ಲ. ಪ್ರವಾಹ ಪರಿಹಾರ ಘೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲರಾದ ಸಿದ್ದರಾಮಯ್ಯ, ಈ ಹಿಂದೆ 2009ರಲ್ಲಿ ನೆರೆ ಬಂದಾಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇತ್ತು. ಯಡಿಯೂರಪ್ಪ ಸಿಎಂ ಇದ್ರು. ಕೇಂದ್ರದಲ್ಲಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದರು. ಪ್ರವಾಹವಾದ ಎರಡೇ ದಿನಕ್ಕೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ 1,609 ಕೋಟಿ ರೂ. ಬಿಡುಗಡೆಗೊಳಿಸಿದ್ದರು ಎಂದು ತಿಳಿಸಿದರು.

RAIN 7 copy

ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಈವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಮೋದಿಗೆ ಕಣ್ಣು, ಬಾಯಿ ಇಲ್ಲಾ. ಕಣ್ಣು ಕಾಣಿಸಲ್ಲ ಅನಿಸುತ್ತದೆ. ಪ್ರವಾಹ ಪರಿಸ್ಥಿತಿಯನ್ನು ಬಂದು ನೋಡಬೇಕಾಗಿತ್ತು ಆದರೆ, ನೋಡಿಲ್ಲ. ಕೂಡಲೇ ಕೇಂದ್ರ ಸರ್ಕಾರ ಪರಿಹಾರ ಕಾರ್ಯಗಳಿಗೆ ಮೊದಲು ಐದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ನಂತರ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ ಬಳಿಕ ಕೇಂದ್ರದ ತಂಡ ಸಮೀಕ್ಷೆ ನಡೆಸಿ ಉಳಿದ ಹಣ ನೀಡಬೇಕೆಂದು ಒತ್ತಾಯಿಸಿದರು. ಪರಿಹಾರ ನಿಧಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮುಂದೆ ಬಾಯ್ಬಿಡುತ್ತಿಲ್ಲಾ. ಕೇಂದ್ರ ಸರ್ಕಾರ ರಾಜ್ಯದಿಂದ 25 ಜನ ಸಂಸದರು ಹಾಗೂ 105 ಜನರ ಮಾತು ಕೇಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *