ಯಾದಗಿರಿ: ಇವಿಎಂನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಏನಾದರೂ ಲೋಪದೋಷಗಳಿದ್ದರೆ ಬಗೆಹರಿಸಲು ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದೆವು ಎಂದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯದ ಸ್ಥಿತಿ ನೋಡಿದರೆ ನಾವು ಈಗಲೇ ಫಲಿತಾಂಶ ಹೇಳಲು ಸಾಧ್ಯವಿಲ್ಲ. ಚುನಾವಣೋತ್ತರ ಸರ್ವೆಯಲ್ಲಿ ಕಾಂಗ್ರೆಸ್ ಹಿನ್ನೆಡೆಯಾಗಲಿದೆ ಎನ್ನುವ ಫಲಿತಾಂಶ ಬಂದಿದ್ದರೆ, ಈಗ ನಾವು ಮುನ್ನಡೆಯಲ್ಲಿದ್ದೇವೆ. ಈಗಲೇ ನಾನು ಫಲಿತಾಂಶದ ಬಗ್ಗೆ ಏನು ಹೇಳುವುದಿಲ್ಲ ಎಂದು ತಿಳಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ಇವಿಎಂ ಇಷ್ಟ ಪಟ್ಟರೆ ಇರಲಿ. ಗುಜರಾತ್ ಹಾಗೂ ಹಿಮಾಚಲದಲ್ಲಿ ಕಾಂಗ್ರೆಸ್ ಗೆದ್ದರೆ ನೇರವಾಗಿ ನಮ್ಮ ರಾಜ್ಯದಲ್ಲಿ ಪರಿಣಾಮ ಬೀರುತ್ತದೆ ಎನ್ನುವುದಕ್ಕಿಂತ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಲಿದೆ. 22 ವರ್ಷಗಳ ನಂತರ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಪ್ರಮುಖ ವಿಚಾರವೇ ಎಂದು ಅವರು ಪ್ರತಿಕ್ರಿಯಿಸಿದರು.
ಗುಜರಾತ್ ಚುನಾವಣೆಯಲ್ಲಿ ಬಳಕೆಯಾದ ವಿದ್ಯುನ್ಮಾನ ಮತಯಂತ್ರಗಳನ್ನು ಮತ ಎಣಿಕೆಯ ವೇಳೆ ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು. ಚುನಾವಣೆ ಮತ ಎಣಿಕೆ ವೇಳೆ ವಿವಿಪ್ಯಾಟ್ ಗಳಲ್ಲಿ ಬಿದ್ದಿರುವ ವೋಟ್ ಮತ್ತು ಇವಿಎಂನಲ್ಲಿ ಬಿದ್ದಿರುವ ವೋಟ್ ಗಳನ್ನು ತಾಳೆ ಮಾಡಬೇಕು. ಕನಿಷ್ಟ 25% ಇವಿಎಂ ಗಳನ್ನಾದರೂ ಬಳಸಿ ಕ್ರಾಸ್ ಚೆಕ್ ಮಾಡಲು ಚುನಾವಣಾ ಆಯೋಗಕ್ಕೆ ಆದೇಶಿಸಬೇಕು ಎಂದು ಗುಜರಾತ್ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ವೇಳೆ ಈ ಅರ್ಜಿ ಪರಿಶೀಲಿಸಲು ಯೋಗ್ಯವಲ್ಲ. ಇದರ ಬದಲಾಗಿ ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಒಂದು ರಿಟ್ ಅರ್ಜಿ ಸಲ್ಲಿಸಿ ಎಂದು ಸೂಚಿಸಿ ಈ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ. ಈ ಸಂದರ್ಭದಲ್ಲಿ ತನ್ನ ಪರಮಾಧಿಕಾರವನ್ನು ಬಳಸಿ ಚುನಾವಣಾ ಆಯೋಗದ ಕಾರ್ಯದಲ್ಲಿ ನಾನು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಗುಜರಾತ್ ಕಾಂಗ್ರೆಸ್, ಇವಿಎಂ ಹ್ಯಾಕ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಇವಿಎಂಗಳಿಗೆ ಬ್ಲೂ ಟೂತ್ ಸಾಧನಗಳನ್ನು ಅಳವಡಿಸಲಾಗಿದೆ. ಹೀಗಾಗಿ ಮತ ಎಣಿಕೆಯ ವೇಳೆ ಇವಿಎಂಗಳನ್ನು ಮರು ಪರಿಶೀಲಸಬೇಕು ಎಂದು ಮನವಿ ಮಾಡಿತ್ತು
ಇದನ್ನೂ ಓದಿ: ರಾಜ್ಯದಲ್ಲೂ ಶುರುವಾಯ್ತು ಇವಿಎಂ ಗದ್ದಲ