Connect with us

Districts

ರಾಜ್ಯದಲ್ಲೂ ಶುರುವಾಯ್ತು ಇವಿಎಂ ಗದ್ದಲ

Published

on

ರಾಯಚೂರು: ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ `ಇವಿಎಂ’ ಗದ್ದಲ ಆರಂಭವಾಗಿದ್ದು, ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರದ ಬದಲಾಗಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಯಚೂರಿನಲ್ಲಿ ಇಂದು ಮಾತನಾಡಿದ ಅವರು, ಈಗಾಗಲೇ ದೇಶಾದ್ಯಂತ ಸಾಕಷ್ಟು ಜನ ಇವಿಎಂ ಮತದಾನವನ್ನು ವಿರೋಧಿಸಿದ್ದಾರೆ. ಕರ್ನಾಟಕದಲ್ಲಿಯೂ ಮುಂದಿನ ವಿಧಾನ ಸಭಾ ಚುನಾವಣೆ ವೇಳೆಯಲ್ಲಿ ಇವಿಎಂ ರದ್ದು ಮಾಡಿ ಹಳೆ ಬ್ಯಾಲೆಟ್ ಪೇಪರ್ ಪದ್ಧತಿಯಲ್ಲೇ ಮತದಾನ ಮಾಡಬೇಕು. ನಾನು ಇವಿಎಂ ವಿಚಾರವಾಗಿ ತಜ್ಞರ ಬಳಿ ಮಾತನಾಡಿದ್ದೇನೆ, ಇವಿಎಂ ದುರ್ಬಳಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ ಎಂದರು.

ಈಗಾಗಲೇ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಇವಿಎಂ ಬಳಕೆ ಮಾಡಿ ಮತ್ತೆ ಹಳೆ ಪದ್ಧತಿಗೆ ಮರಳಿದ್ದಾರೆ. ಇದನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಕಷ್ಟ ಯಾಕೆ? ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಚುನಾವಣಾ ಆಯೋಗ ಸ್ವಾತಂತ್ರ ಸಂಸ್ಥೆಯಾದರೂ ಅದರ ಮುಖ್ಯಸ್ಥರನ್ನು ನೇಮಕ ಮಾಡುವುದು ಕೇಂದ್ರ ಸರ್ಕಾರವೇ. ಅದ್ದರಿಂದ ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಕುರಿತು ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಅಲ್ಲದೇ ಪತ್ರವನ್ನು ಬರೆಯುತ್ತೇನೆ ಎಂದರು. (ಇದನ್ನೂ ಓದಿ: ಕಾಂಗ್ರೆಸ್‍ನಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಬಹಿಷ್ಕಾರ? )

ಇವಿಎಂ ಬಳಕೆ ಮಾಡುವ ವಿಚಾರವಾಗಿ ದೇಶದ್ಯಾಂತ ಹಲವು ರಾಜಕೀಯ ಪಕ್ಷಗಳು ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯಾಗಿದೆ. ಯಾರೇ ವೋಟ್ ಮಾಡಿದ್ರು ಅದು ಬಿಜೆಪಿಗೆ ಹೋಗ್ತಿದೆ ಅಂತ ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಗಂಭೀರ ಆರೋಪ ಮಾಡಿದ್ದರು. ಬಳಿಕ ಎಎಪಿ, ಎಡಪಕ್ಷಗಳೂ ದನಿಗೂಡಿಸಿದ್ದವು. ಅದರಲ್ಲೂ ಆಪ್ ಅಂತು ಚುನಾವಣಾ ಆಯೋಗಕ್ಕೆ ಸವಾಲು ಎಸೆದಿತ್ತು. ಅಷ್ಟೇ ಅಲ್ಲದೆ ವಿಶೇಷ ಅಧಿವೇಶನ ನಡೆಸಿ ಡಮ್ಮಿ ಇವಿಎಂ ಬಳಸಿ ಹೇಗೆಲ್ಲಾ ದುರ್ಬಳಕೆ ಮಾಡಬಹುದು ಅನ್ನೋದರ ಡೆಮೋ ತೋರಿಸಿತ್ತು. ಈ ವಿವಾದ ವ್ಯಾಪಕ ಚರ್ಚೆಯಾದ ಬೆನ್ನಲ್ಲಿ ಕೇಂದ್ರ ಚುನಾವಣಾ ಆಯೋಗವೇ ರಾಜಕೀಯ ಪಕ್ಷಗಳಿಗೆ ಪಂಥಾಹ್ವಾನ ನೀಡಿ, ಪರೀಕ್ಷೆ ನಡೆಸಿತ್ತು. ಆದರೆ ಉತ್ತರ ಪ್ರದೇಶ ಚುನಾವಣೆಗೆ ಬಳಸಿ ಇವಿಎಂ ಕೊಡದಿದ್ದ ಕಾರಣ ಆಪ್ ದೂರ ಉಳಿದಿತ್ತು.

ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆದ ನಂತರ ಇವಿಎಂ ಬಳಕೆ ಕುರಿತು ಮತ್ತೆ ಅಪಸ್ವರ ಕೇಳಿ ಬಂದಿತ್ತು. ಇವಿಎಂ ಬಳಕೆ ಮಾಡದೆ ನಡೆದ ಚುನಾವಣೆಯಲ್ಲಿ ಬೇರೆ ಪಕ್ಷದವರು ಮತ್ತು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಈ ವಿಚಾರವಾಗಿ ಮತ್ತೊಮ್ಮೆ ಮಾಯಾವತಿ, ಅಖಿಲೇಶ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಲಾಲೂ ಪ್ರಸಾದ್ ಹಾಗೂ ಸೀತಾರಾಂ ಯಚೂರಿ ಸೇರಿದಂತೆ ವಿಪಕ್ಷ ನಾಯಕರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು.

 

 

Click to comment

Leave a Reply

Your email address will not be published. Required fields are marked *