ಪ್ರತಿ ಸಾರಿಯೂ ಚುನಾವಣೆ ಬಂದಾಗ ಡಾ.ರಾಜ್ ಕುಟುಂಬದ ಸದಸ್ಯರ ಹೆಸರು ಕಾಣಿಸಿಕೊಳ್ಳುತ್ತದೆ. ಅದು ರಾಜಕುಮಾರ್ ಕಾಲದಿಂದಲೂ ಕೇಳಿ ಬರುತ್ತಿದೆ. ಈ ಹಿಂದೆ ರಾಜಕುಮಾರ್ ಅವರನ್ನು ಚುನಾವಣೆಗೆ ನಿಲ್ಲಿಸುವ ಕಸರತ್ತು ನಡೆಯಿತು. ಆದರೆ, ರಾಜಕೀಯ ಪ್ರವೇಶಕ್ಕೆ ಅವರು ನಿರಾಕರಿಸಿದರು. ರಾಜಕೀಯ ಪಕ್ಷಗಳಿಂದ ಸದಾ ಅಂತರವನ್ನೇ ಕಾದುಕೊಂಡು ಬಂದರು. ಚುನಾವಣೆಯ ನಿಲ್ಲಿಸುವ ವಿಚಾರ ಜೋರಾದಾಗ, ತಪ್ಪಿಸಿಕೊಂಡು ಓಡಾಡಿದರು.
ನಂತರ ಹೆಸರು ಬಂದಿದ್ದು ಪುನೀತ್ ರಾಜಕುಮಾರ್ ಅವರದ್ದು. ಬೆಂಗಳೂರಿನಲ್ಲಿ ಪುನೀತ್ ಅವರು ಮೋದಿಯನ್ನು ಭೇಟಿಯಾದಾಗ ಪುನೀತ್ ಬಿಜೆಪಿ ಸೇರಿಕೊಳ್ಳುತ್ತಾರೆ ಎನ್ನುವ ಸುದ್ದಿ ಆಯಿತು. ಅಲ್ಲದೇ, ಬಿಜೆಪಿಯ ಹಲವು ಮುಖಂಡರು ಪುನೀತ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದರು. ಆಗಂತೂ ಇನ್ನೂ ದೊಡ್ಡ ಸುದ್ದಿ ಆಯಿತು. ನಂತರದ ದಿನಗಳಲ್ಲಿ ಅವರು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತಮಗೂ ರಾಜಕೀಯಕ್ಕೂ ಯಾವುದೇ ಕಾರಣಕ್ಕೂ ನಂಟು ಇರುವುದಿಲ್ಲ ಎಂದು ಮಾತನಾಡಿದರು. ಇದನ್ನೂ ಓದಿ: ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ
ಪುನೀತ್ ಕಾಲವಾದ ನಂತರ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೆಸರು ಕೂಡ ಮುನ್ನೆಲೆಗೆ ಬಂತು. ಅಶ್ವಿನಿ ಅವರು ಸದ್ಯದಲ್ಲೇ ರಾಜಕೀಯ ಪ್ರವೇಶ ಮಾಡುತ್ತಾರೆ ಎಂದು ಹೇಳಲಾಯಿತು. ಈಗಲೂ ಅವರ ಹೆಸರು ಚಾಲ್ತಿಯಲ್ಲಿದೆ. ಆದರೆ, ಈ ಕುರಿತು ಅವರು ಇನ್ನೂ ಸ್ಪಷ್ಟನೆ ನೀಡಿಲ್ಲ. ಆದರೂ, ಅಶ್ವಿನಿ ಅವರ ಹೆಸರು ಇನ್ನೂ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಕಾದು ನೋಡಬೇಕು.
ಈ ನಡುವೆ ಶಿವರಾಜ್ ಕುಮಾರ್ ಹೆಸರು ಕೂಡ ರಾಜಕಾರಣದಲ್ಲಿ ಕೇಳಿ ಬಂದಿದೆ. ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಈಗಾಗಲೇ ರಾಜಕೀಯ ಅಖಾಡ ಪ್ರವೇಶ ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಶಿವಣ್ಣ ಹೆಸರು ತೇಲಿ ಬಂದಿದೆ. ಈ ಕುರಿತು ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ತಮಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ತಾವು ರಾಜಕಾರಣ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ.