ಕೊಪ್ಪಳ: ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತಿನ ಮೇಲೆ ಹಿಡಿತ ಇರಬೇಕು. ನಾನು ಮೋದಿಗಿಂತ ಚೆನ್ನಾಗಿ ಮಾತನಾಡಬಲ್ಲೆ. ಆದರೆ ನನಗೆ ಹಿಂದಿ ಬರೋದಿಲ್ಲ ಎನ್ನುತ್ತಾ ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿಗಿಂತ ಚೆನ್ನಾಗಿ ನನಗೆ ಮಾತನಾಡಲು ಬರುತ್ತದೆ. ಆದರೆ ನನಗೆ ಹಿಂದಿ ಬರುವುದಿಲ್ಲ. ರಾಜ್ಯಕ್ಕೆ ಸಮಸ್ಯೆ ಬಂದಾಗ ದೇವೇಗೌಡರ ಕುಟುಂಬ ಕಣ್ಣೀರು ಹಾಕಿದೆ. ಕಾವೇರಿ ವಿಷಯಕ್ಕೆ ಕಾಂಗ್ರೆಸ್‍ನವರು ಕಣ್ಣೀರು ಹಾಕಿಲ್ಲ, ಬಿಜೆಪಿಯವರು ಪ್ರಶ್ನೆ ಹಾಕಿಲ್ಲ. 17 ಜನ ಎಂಪಿಗಳು ಹಾಗೂ ನಾಲ್ಕು ಜನ ಕಾಂಗ್ರೆಸ್ ಮಿನಿಸ್ಟರ್ ಇದ್ದರೂ ಕಣ್ಣೀರು ಹಾಕಿಲ್ಲ. ಆದ್ರೆ ನಾಮ್ಮ ಕುಟುಂಬ ಕಣ್ಣೀರು ಹಾಕಿದೆ ಎಂದು ಹೇಳುವ ಮೂಲಕ ನಮ್ಮ ಕುಟುಂಬ ಭಾವನಾತ್ಮಕವಾಗಿ ಕಣ್ಣೀರು ಹಾಕುತ್ತೆ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದೇವೆ. ಈಗಾಗಲೇ ಮತದಾರನ ತೀರ್ಪು ಪೆಟ್ಟಿಗೆಯಲ್ಲಿ ಸೀಲ್ ಆಗಿದೆ. ಮತದಾರರ ತೀರ್ಪನ್ನು ನಾವು ಒಪ್ಪಬೇಕು. ಇಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅಭ್ಯರ್ಥಿಯಾಗಿ ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತೇವೆ. ಆದ್ರೆ ಮತದಾರರ ತೀರ್ಪು ಗೌರವಿಸಬೇಕು ಎಂದು ಹೆಚ್‍ಡಿಡಿ ಹೇಳಿದರು.