ಚಿತ್ರದುರ್ಗ: ಪೊಲೀಸರ ಬೆಂಗಾವಲಿನಲ್ಲಿ ಮಠಕ್ಕೆ ವಾಪಸ್ಸಾಗುತ್ತಿದ್ದೇನೆ ಎಂದು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಬಂಧನ ಆಗಿಲ್ಲ. ಚಿತ್ರದುರ್ಗ ಮಠಕ್ಕೆ ವಾಪಸ್ ಆಗುತ್ತಿದ್ದೇನೆ. ಪೊಲಿಸರ ಬೆಂಗಾವಲಿನಲ್ಲಿಯೇ ಮಠದತ್ತ ಹೋಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ರಾತ್ರಿ ಧಾರವಾಡ ಮಠಕ್ಕೆ ಹೋಗಿದ್ದೆ. ಇದೀಗ ಪೊಲೀಸ್ ಭದ್ರತೆಯೊಂದಿಗೆ ವಾಪಸ್ಸಾಗುತ್ತಿದ್ದೇನೆ. ಪೊಲಿಸರೇ ನನಗೆ ಭದ್ರತೆ ಕೊಟ್ಟಿದ್ದಾರೆ. ಬಂಧನ ಅನ್ನೋದು ಸುಳ್ಳು ಎಂದು ಶ್ರೀಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಮಾಜ ತಿದ್ದುವ ಶ್ರೀಗಳ ಮೇಲೆ ಇಲ್ಲ ಸಲ್ಲದ ಆರೋಪ ಸಲ್ಲದು: ಉಮೇಶ್ ಕತ್ತಿ
ಇತ್ತ ಶ್ರೀಗಳು ಮಠಕ್ಕೆ ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆಯೇ ಸುದ್ದಿಗೋಷ್ಠಿ ನಡೆಸಿದ್ದ ಶ್ರೀಗಳು ಬಳಿಕ ಮಠದಲ್ಲಿಯೇ ಏಕಾಂತದಲ್ಲಿದ್ದರು. ತದನಂತರ ಅವರು ಮಠದಿಂದ ತೆರಳಿದ್ದು, ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಇತ್ತ ಮಠದಲ್ಲಿ ಭಕ್ತರು ಮೌನಕ್ಕೆ ಜಾರಿದ್ದರು.