ನಾನು ಒಬ್ಬ ಮಠ ಇಲ್ಲದ ಸ್ವಾಮೀಜಿ ಇದ್ದಂತೆ: ಸಿ.ಎಂ.ಇಬ್ರಾಹಿಂ

Public TV
2 Min Read
cm ibrahim 3

– ನಾವು ತಲೆಹಿಡುಕರಲ್ಲ, ಪಾದ ಹಿಡಿಯುವವರು
– ಈಶ್ವರಪ್ಪಗೆ ಸಿ.ಎಂ.ಇಬ್ರಾಹಿಂ ತಿರುಗೇಟು

ಬಾಗಲಕೋಟೆ: ನಾವು ತಲೆ ಹಿಡಿಯುವವರಲ್ಲ, ಪಾದ ಹಿಡಿಯುವವರು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ನಗರದಲ್ಲಿ ಮಾತನಾಡಿದ ಮಾಜಿ ಸಚಿವರು, ಸಿ.ಎಂ.ಇಬ್ರಾಹಿಂ ಓರ್ವ ತಲೆಹಿಡುಕ ಎಂಬ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯ ಬಗ್ಗೆ ಕಿಡಿಕಾರಿದರು. ಜನರ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಾನು ಒಬ್ಬ ಮಠ ಇಲ್ಲದ ಸ್ವಾಮೀಜಿ ಇದ್ದಂತೆ. ಈಶ್ವರಪ್ಪನವರ ಭಾಷೆ ಸಂಸ್ಕೃತಿ ಹೇಗಿದೆ ಅಂತ ಈ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ಕುಟುಕಿದರು.

C.M Ibrahim KS Eshwarappa 1

ಕೆ.ಎಸ್.ಈಶ್ವರಪ್ಪ ಅವರು ನಮ್ಮ ಸ್ನೇಹಿತರು. ಚುನಾವಣೆ ಮುಗಿಯುವವರೆಗೂ ಇಂತವೆಲ್ಲ ನಡೆಯುತ್ತವೆ. ಆಮೇಲೆ ಎಲ್ಲ ಸರಿಯಾಗುತ್ತದೆ. ಅವರು ಒಳ್ಳೆಯ ಶಬ್ದ ಬಳಸುವಂತಾಗಲಿ. ಈ ನಿಟ್ಟನಲ್ಲಿ ಕೆ.ಎಸ್.ಈಶ್ವರಪ್ಪ ಅವರು ಮೂರು ತಿಂಗಳು ಯಾವುದಾದರೊಂದು ಮಠದಲ್ಲಿ ಕಾಲ ಕಳೆಯುವುದು ಉತ್ತಮ ಎಂದು ವ್ಯಂಗ್ಯವಾಡಿದರು.

ಮೈಸೂರಿನಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಹೆಸರು ಪ್ರಸ್ತಾಪ ಮಾಡಿದರು. ಯಾವಾಗ ಅವರು ಸುಮಲತಾ ಹೆಸರು ಪ್ರಸ್ತಾಪ ಮಾಡಿದರೋ ಆವಾಗ್ಲೇ ನಮ್ಮ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಪಕ್ಕಾ ಆಗಿದೆ ಎಂದು ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.

MYS Modi

ಕಾಂಗ್ರೆಸ್-ಜೆಡಿಎಸ್ ನಾಯಕರ ಬೆಂಬಲಿಗರು, ಆಪ್ತರ ಮನೆಯ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಪ್ರಧಾನಿ ಮೋದಿ ಅವರಿಗೆ ನಾವು ಎಲ್ಲ ಕಡೆ ಗೆಲ್ಲುತ್ತೇವೆ ಅಂತ ರಿಪೋರ್ಟ್ ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಆದಾಯ ತೆರಿಗೆ (ಐಟಿ) ದಾಳಿ ನಡೆಸಲು ಶುರು ಮಾಡಿದರು. ಬಿಜೆಪಿ ಅಭ್ಯರ್ಥಿಗಳ ಮನೆಯ ಮೇಲೂ ಐಟಿ ದಾಳಿ ಮಾಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.

ಚಿತ್ರದುರ್ಗ, ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಭೆ ಮಾಡಿದರು. ಸಭೆಗೆ ಎಷ್ಟು ಕೋಟಿ ಖರ್ಚಾಯಿತು? ಆ ದುಡ್ಡು ಎಲ್ಲಿಂದ ಬಂತು? ಹಣ ಯಾರು ಕೊಟ್ಟರು ಎಂದು ಪ್ರಶ್ನಿಸಿದ ಅವರು, ಕೇವಲ ಕಾಂಗ್ರೆಸ್ಸಿಗರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಬೇಕಾ? ಪ್ರಧಾನಿ ಮೋದಿ ಮಾಡುತ್ತಿರುವುದು ಸರಿಯಲ್ಲ. ಅವರು ಕೆಟ್ಟ ಪರಂಪರೆ ಹುಟ್ಟು ಹಾಕುತ್ತಿದ್ದಾರೆ. ಸೋಲಿನ ಭಯದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದರು.

cm Ibrahim

Share This Article
Leave a Comment

Leave a Reply

Your email address will not be published. Required fields are marked *