ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ನಾನೇ ಮೈತ್ರಿ ಅಭ್ಯರ್ಥಿ. ನನ್ನನ್ನೇ ಸ್ಪರ್ಧೆ ಮಾಡುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P Yogeshwar) ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ (Channapatna) ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿ ಅಯ್ಕೆ ವಿಚಾರದ ಬಗ್ಗೆ ಕಳೆದ ವಾರ ನಾನು ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ. ಈಗಾಗಲೇ ಕಾಂಗ್ರೆಸ್ ನವರು ಚುನಾವಣೆಗೆ ಹೋಗ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಅದಕ್ಕೆ ಹೆಚ್‌ಡಿಕೆ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ. ಅದರೇ ಅಧಿಕೃತ ಅನುಮೋದನೆ ಸಿಗಬೇಕು ಅಷ್ಟೇ. ಮೈತ್ರಿ ಪಕ್ಷದ ವರಿಷ್ಠರು ಅಧಿಕೃತ ಘೋಷಣೆ ಮಾಡಬೇಕು. ಕುಮಾರಸ್ವಾಮಿ ಅವರೇ ಬಂದು ಹೆಸರು ಘೋಷಣೆ ಮಾಡಿ ಅಂತ ನಾನು ಕೇಳಿಕೊಂಡಿದ್ದೇನೆ. ಇದಕ್ಕೆ ಹೆಚ್‌ಡಿಕೆ ಕೂಡಾ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಎನ್‌ಡಿಎ (NDA) ಮೈತ್ರಿಯಿಂದ ಗೆದ್ದು ಕೇಂದ್ರ ಮಂತ್ರಿಯಾಗಿದ್ದಾರೆ. ಬಹಳ ಎತ್ತರದ ಸ್ಥಾನಕ್ಕೆ ಹೋಗಿದ್ದಾರೆ. ಕುಮಾರಸ್ವಾಮಿ ಅವರು ಚನ್ನಪಟ್ಟಣಕ್ಕೆ ಬಾರದೇ ಇದ್ದರೆ ನಾನು ಸೋಲನ್ನೇ ಕಾಣುತ್ತಿರಲಿಲ್ಲ. ಚನ್ನಪಟ್ಟಣ ಜನ ನನ್ನನ್ನ ಕೈ ಬಿಡ್ತಿರಲಿಲ್ಲ. ನೀವು ಬಂದ ಮೇಲೆ ನಮ್ಮ ಸಮುದಾಯ ನಿಮ್ಮ ಕೈ ಹಿಡಿದು ಎರಡು ಬಾರಿ ಗೆಲ್ಲಿಸಿದೆ. ಹಾಗಾಗಿ ಕುಮಾರಸ್ವಾಮಿ ಅವರೇ ಬಂದು ನಮ್ಮ ಚುನಾವಣೆ ಮಾಡಬೇಕು ಎಂದರು. ಇದನ್ನೂ ಓದಿ: ವಿಶ್ವನಾಥ್, ಪುತ್ರ ನನ್ನ ಮನೆಗೆ ಸೈಟ್ ಕೇಳೋಕೆ ಬಂದಿದ್ದ ಫೋಟೋ ಇದೆ: ಬೈರತಿ ಸುರೇಶ್ ಬಾಂಬ್!
ನಾನು ಈ ಬಗ್ಗೆ ಕುಮಾರಸ್ವಾಮಿ (HD Kumaraswamy) ಅವರಲ್ಲಿ ಮನವಿ ಮಾಡಿದ್ದೇನೆ. ಅದಕ್ಕೆ ಅವರೂ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ತಾಲೂಕಿನ ಜನರ ಆತಂಕ, ಒತ್ತಡ ಹೆಚ್ಚಾಗ್ತಿದೆ. ನಮ್ಮ ಕಾರ್ಯಕರ್ತರು, ಮುಖಂಡರು ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ಗೊಂದಲಕ್ಕೆ ಅವಕಾಶ ಕೊಡದೇ ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ ಆಗಬೇಕು. ಹೆಚ್‌ಡಿಕೆ ಇನ್ನೆರಡು ದಿನಗಳಲ್ಲಿ ಸಭೆ ಮಾಡಿ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಾರೆ. ಅವರ ಮನವೊಲಿಸಿ ಅಭ್ಯರ್ಥಿ ಹೆಸರು ಘೋಷಣೆ ಮಾಡ್ತಾರೆ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.