ಹೈದರಾಬಾದ್: ಮೊಬೈಲ್ ಫೋನ್ ಗಾಗಿ ತನ್ನ ಗೆಳೆಯನನ್ನೇ ಅಪಹರಿಸಿ ಬರ್ಬರವಾಗಿ ಕೊಂದು ಹಾಕಿದ ಘಟನೆ ತೆಲಂಗಾಣದ ಹೈದರಾಬಾದ್ ನ ಉಪ್ಪಳ ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪ್ರೇಮ್ (17) ಕೊಲೆಯಾದ ವಿದ್ಯಾರ್ಥಿ. ಶನಿವಾರ ಕಾಲೇಜಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ. ಮೃತ ಪ್ರೇಮ್ ನ ಸ್ನೇಹಿತ ಆರೋಪಿ ಸಾಗರ್ ನನ್ನು (19) ಪೊಲೀಸರು ಬಂಧಿಸಿದ್ದಾರೆ.
Advertisement
ಕೊಲೆ ಮಾಡಿದ್ದು ಯಾಕೆ?
ಆರೋಪಿಯು ಪ್ರೇಮ್ ಬಳಿ ಮೊಬೈಲ್ ಫೋನ್‍ನನ್ನು ಕೊಡುವಂತೆ ಕೇಳಿದ್ದಾನೆ. ಆದರೆ ಇದಕ್ಕೆ ಪ್ರೇಮ್ ನಿರಾಕರಿಸಿದ್ದ. ಹೀಗಾಗಿ ಆತನನ್ನು ಕೊಂದು ಮೊಬೈಲ್ ಫೋನ್ ಪಡೆದುಕೊಳ್ಳಲು ನಿರ್ಧರಿಸಿದ್ದಾನೆ. ಅಲ್ಲದೇ ಶನಿವಾರ ಪ್ರೇಮ್‍ನನ್ನು ರಾಮನಾಥಪುರದ ಕಾಲೇಜಿನಿಂದ ಲಾಂಗ್ ಡ್ರೈವ್ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಉಪ್ಪಳ ಪ್ರದೇಶದಲ್ಲಿ ಪ್ರೇಮ್ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾನೆ. ಬಳಿಕ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಸಾಗರ್ ಎಂಬಾತ ಮೂಲತಃ ಅಮೇಜಾನ್ ಡಿಲೆವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಘಟನೆ ಸಂಬಂಧ ಆರೋಪಿಯಿಂದ ಕದ್ದ ಮೊಬೈಲ್, ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಟರ್ ಬಾಟಲ್ ಗಳು ಹಾಗು ಸುಟ್ಟ ಬಟ್ಟೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಾಗರ್ ಮೂಲತಃ ಹಳೆ ರಾಮನಾಥಪುರದ ನಿವಾಸಿಯಾಗಿದ್ದು, ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ಅದೇ ಪ್ರದೇಶದಲ್ಲಿರುವ ಮೃತ ಪ್ರೇಮ್ ಆರೋಪಿಯ ಸ್ನೇಹಿತನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
Advertisement
ಆರೋಪಿಯು ಹತ್ಯೆ ನಂತರ ಮೊಬೈಲನ್ನು ಮಾರಿ ತನ್ನ ಸಾಲವನ್ನು ತೀರಿಸಿಕೊಂಡಿದ್ದಾನೆ. ಆದರೆ ಆ ಮೊಬೈಲ್ 15 ಸಾವಿರ ರೂಪಾಯಿಗೂ ಬೆಲೆ ಬಾಳುವುದಿಲ್ಲ ಎಂದು ಮಲ್ಕಜಗಿರಿ ಪೊಲೀಸ್ ಆಯುಕ್ತರಾದ ಉಮಾಮಹೇಶ್ವರ ಶರ್ಮ ತಿಳಿಸಿದ್ದಾರೆ.
Advertisement
ಸಿಕ್ಕಿಬಿದ್ದಿದ್ದು ಹೇಗೆ?
ಶನಿವಾರ ಪ್ರೇಮ್ ಕಾಲೇಜಿನಿಂದ ಮರಳಿ ಬಾರದ ಹಿನ್ನೆಲೆಯಲ್ಲಿ ಪೋಷಕರು ಅನುಮಾನಗೊಂಡು ಸ್ಥಳೀಯ ಉಪ್ಪಾಳ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಕಾಲೇಜಿನಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಈ ವೇಳೆ ಪ್ರೇಮ್ ತನ್ನ ಸ್ನೇಹಿತನಾದ ಸಾಗರ್ ಎಂಬಾತನೊಂದಿಗೆ ಬೈಕ್ ನಲ್ಲಿ ಹೋಗಿರುವುದು ತಿಳಿದು ಬಂದಿದೆ. ಕೂಡಲೇ ಪೊಲೀಸರು ಸಾಗರ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.