– ಬೆಂಕಿಗೆ ಮಗಳನ್ನೂ ತಳ್ಳಿ ಕ್ರೌರ್ಯ
ಹೈದರಾಬಾದ್: ವ್ಯಕ್ತಿಯೊಬ್ಬ ಮಕ್ಕಳ ಮುಂದೆಯೇ ಪತ್ನಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್‌ನ (Hyderabad) ನಲ್ಲಕುಂಟಾ ಪ್ರದೇಶದಲ್ಲಿ ನಡೆದಿದೆ. ಅದೇ ಬೆಂಕಿಗೆ ಮಗಳನ್ನು ಸಹ ತಳ್ಳಿ ಕ್ರೌರ್ಯ ಮೆರೆದಿದ್ದಾನೆ.
ವೆಂಕಟೇಶ್ ತನ್ನ ಪತ್ನಿ ತ್ರಿವೇಣಿ ಮೇಲೆ ಅಕ್ರಮ ಸಂಬಂಧ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಮುಂದೆಯೇ ತ್ರಿವೇಣಿ ಮೇಲೆ ಹಲ್ಲೆ ನಡೆಸಿ, ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಗಳು ತನ್ನ ತಾಯಿಯನ್ನು ಉಳಿಸಲು ಪ್ರಯತ್ನಿಸಿದಾಗ, ಆಕೆಯನ್ನೂ ಬೆಂಕಿಗೆ ತಳ್ಳಿ ಮನೆಯಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟೊರೊಂಟೊ ವಿವಿ ಬಳಿ 20 ವರ್ಷದ ಭಾರತೀಯ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ; ಆರೋಪಿ ಬಂಧನ
ಕಿರುಚಾಟ ಕೇಳಿ ನೆರೆಹೊರೆಯವರು ಅವರ ಮನೆಗೆ ಧಾವಿಸಿದರು. ಆ ಹೊತ್ತಿಗೆ, ತೀವ್ರವಾದ ಸುಟ್ಟ ಗಾಯಗಳಿಂದ ತ್ರಿವೇಣಿ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆಯ ಅಂತರದಲ್ಲಿ ಪಾರಾದ ಅವರ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.
ವೆಂಕಟೇಶ್ ಮತ್ತು ತ್ರಿವೇಣಿ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗಳು ಮತ್ತು ಒಬ್ಬ ಮಗ. ವೆಂಕಟೇಶ್ ತನ್ನ ಹೆಂಡತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿರಂತರ ಕಿರುಕುಳ ಸಹಿಸಲಾಗದೆ ತ್ರಿವೇಣಿ ಇತ್ತೀಚೆಗೆ ತನ್ನ ಹೆತ್ತವರ ಮನೆಗೆ ಹೋಗಿದ್ದಳು. ನಾನು ಬದಲಾಗ್ತೀನಿ, ವಾಪಸ್ ಬಾ ಎಂದು ಪತ್ನಿಗೆ ಮನವೊಲಿಸಿ ವಾಪಸ್ ಕರೆತಂದಿದ್ದ. ಇದನ್ನೂ ಓದಿ: 15 ದಿನಗಳಿಂದ ಲಾಡ್ಜ್‌ನಲ್ಲಿ ವಾಸ – ಮೈಸೂರು ಸ್ಫೋಟಕ್ಕೆ ಎನ್‌ಐಎ ಎಂಟ್ರಿ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ವೆಂಕಟೇಶ್ ಬಂಧನಕ್ಕೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

