– ಕರ್ನಾಟಕದಲ್ಲೇ ಅತಿ ಹೆಚ್ಚು ತೆರಿಗೆ ವಂಚನೆ
– ಆದಾಯ ಕಡಿಮೆ ತೋರಿಸಲು ರೆಸ್ಟೋರೆಂಟ್‌ಗಳ ಕಳ್ಳ ಮಾರ್ಗ
ಹೈದರಾಬಾದ್: ಕೃತಕ ಬುದ್ದಿಮತ್ತೆಯ (AI) ಸಹಾಯದಿಂದಾಗಿ ದೇಶದಲ್ಲಿ ರೆಸ್ಟೋರೆಂಟ್‌ಗಳು ನಡೆಸುತ್ತಿದ್ದ ಭಾರೀ ಅಕ್ರಮವನ್ನು ಆದಾಯ ತೆರಿಗೆ (Income Tax) ಇಲಾಖೆ ಪತ್ತೆ ಹಚ್ಚಿದೆ. 60 ಟೆರಾಬೈಟ್(60 ಸಾವಿರ ಜಿಬಿ) ಡೇಟಾವನ್ನು ಪರಿಶೀಲಿಸಿದ ಎಐ 70 ಸಾವಿರ ಕೋಟಿ ರೂ. ಅಕ್ರಮವನ್ನು ಬಯಲು ಮಾಡಿ ರೆಸ್ಟೋರೆಂಟ್ ಮಾಲೀಕರಿಗೆ ಬಿಸಿ ಮುಟ್ಟಿಸಿದೆ.
ಅನುಮಾನ ಬಂದಿದ್ದು ಹೇಗೆ?
ಕಳೆದ ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹೈದರಾಬಾದ್‌ನ ಕೆಲವು ಜನಪ್ರಿಯ ಬಿರಿಯಾನಿ (Hyderabad Biryani Restaurant) ರೆಸ್ಟೋರೆಂಟ್‌ಗಳಿಗೆ ನಿಯಮಿತ ತಪಾಸಣೆಗೆಂದು ತೆರಳಿದ್ದಾರೆ. ಈ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರು ಆಹಾರ ಸೇವಿಸುತ್ತಿದ್ದರು ಮತ್ತು ಬಿಲ್ಲಿಂಗ್ ಕೌಂಟರ್ ಎಂದಿನಿಂತೆ ಕಾರ್ಯನಿರ್ವಹಿಸುತ್ತಿತ್ತು.
ಮೇಲ್ನೋಟಕ್ಕೆ ಎಲ್ಲ ವ್ಯವಹಾರ ಸರಿಯಾಗಿ ನಡೆಯುತ್ತಿದೆ ಎಂದು ಭಾವಿಸಿದರೂ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ದೋಷ ಇದ್ದಂತೆ ಕಾಣಿಸಿದೆ. ರೆಸ್ಟೋರೆಂಟ್ ಒಳಗೆ ಊಟ ಮಾಡುವವರ ಸಂಖ್ಯೆಗೂ ಬಿಲ್ಲಿಂಗ್‌ಗೂ ಹೊಂದಾಣಿಕೆ ಆಗುತ್ತಿರಲಿಲ್ಲ.
ಬಿಲ್‌ನಲ್ಲಿ ಗೋಲ್ಮಾಲ್ ಮಾಡುತ್ತಿರುವ ಅನುಮಾನ ಬಂದ ಕೂಡಲೇ ಈ ಒಂದು ರೆಸ್ಟೋರೆಂಟ್ ಈ ರೀತಿ ವಂಚನೆ ಮಾಡುತ್ತಿರಬಹುದು ಎಂದು ಅಧಿಕಾರಿಗಳು ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಮತ್ತಷ್ಟು ರೆಸ್ಟೋರೆಂಟ್‌ಗಳಿಗೆ ಹೋದಾಗ ಎಲ್ಲರೂ ಈ ಕುತಂತ್ರ ಮಾಡುತ್ತಿರುವುದು ಬಯಲಾಗಿದೆ. ವಂಚನೆ ತನಿಖೆಯ ಆಳಕ್ಕೆ ಇಳಿದಾಗ ಈ ರೆಸ್ಟೋರೆಂಟ್‌ಗಳು ಒಂದೇ ಬಿಲ್ಲಿಂಗ್ ಸಾಫ್ಟ್‌ವೇರ್ ಬಳಸುತ್ತಿರುವುದು ಗೊತ್ತಾಗಿದೆ.

ತನಿಖೆ ನಡೆದಿದ್ದು ಹೇಗೆ?
ಒಂದೇ ಬಿಲ್ಲಿಂಗ್ ಸಾಫ್ಟ್‌ವೇರ್ ಬಳಸಿ ತೆರಿಗೆ ವಂಚನೆ ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ 2019–20 ರರಿಂದ ಹಿಡಿದು ಕಳೆದ 6 ವರ್ಷದ ಎಲ್ಲಾ ಬಿಲ್‌ಗಳನ್ನು ಪರಿಶೀಲನೆ ಮಾಡಲು ಅಧಿಕಾರಿಗಳು ಮುಂದಾದರು. ಅಹಮದಾಬಾದ್‌ನಲ್ಲಿರುವ ಬಿಲ್ಲಿಂಗ್ ಸಾಫ್ಟ್‌ವೇರ್ ಪೂರೈಕೆದಾರರನಿಂದ ಸಾಫ್ಟ್‌ವೇರ್ ಪಡೆದಿದ್ದಾರೆ. ಈ ಸಾಫ್ಟ್‌ವೇರ್ ಬಳಸಿ ಎಷ್ಟು ಬಿಲ್ ಡಿಲೀಟ್ ಮಾಡಲಾಗಿದೆ ಎಂಬ ಲೆಕ್ಕ ತೆಗೆಯಲು ಆದಾಯ ತೆರಿಗೆ ಇಲಾಖೆ ವಿಧಿ ವಿಜ್ಞಾನ ಇಲಾಖೆಯ ಮೊರೆ ಹೋಗಿದೆ.
ವಿಧಿವಿಜ್ಞಾನ ಇಲಾಖೆಯಿಂದಾಗಿ ಡಿಲೀಟ್ ಮಾಡಲಾದ ಎಲ್ಲಾ ಬಿಲ್‌ಗಳ ಡೇಟಾವನ್ನು ಮತ್ತೆ ತೆಗೆಯಲಾಗಿದೆ. ಹೀಗೆ ತೆಗೆದಾಗ ಸುಮಾರು 2.43 ಲಕ್ಷ ಬಿಲ್‌ಗಳು ಜನರೇಟ್ ಆದವು. ಎಲ್ಲಾ 2.43 ಲಕ್ಷ ಬಿಲ್‌ಗಳನ್ನು ಪರಿಶೀಲನೆ ಮಾಡಲು ಸಾಧ್ಯವಾಗದ ಕಾರಣ ಆದಾಯ ತೆರಿಗೆ ಇಲಾಖೆ ಎಐ ಸಹಾಯ ಪಡೆದಿದೆ.
60 ಟೆರಾಬೈಟ್‌ಗಳ ಬಿಲ್ಲಿಂಗ್ ಡೇಟಾವವನ್ನು ಸುಧಾರಿತ ವಿಶ್ಲೇಷಣೆ, ಜನರೇಟಿವ್ ಎಐ ಪರಿಕರ ಮತ್ತು ರೆಸ್ಟೋರೆಂಟ್‌ಗಳ ಜಿಎಸ್‌ಟಿ ನಂಬರ್ ಬಳಸಿ ದಾಖಲೆಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಸ್ಕ್ಯಾನ್ ಮಾಡಿದ ಬಳಿಕ ಬಂದ ರಿಸಲ್ಟ್ ನೋಡಿ ಅಧಿಕಾರಿಗಳು ಶಾಕ್ ಆಗಿದ್ದು ಕನಿಷ್ಠ 70 ಸಾವಿರ ಕೋಟಿ ತೆರಿಗೆ ವಂಚನೆ ನಡೆದಿರುವ ಶಂಕೆ ಈಗ ವ್ಯಕ್ತವಾಗಿದೆ.
ಅಕ್ರಮ ಹೇಗೆ?
ಜನರು ಆಹಾರ ತಿನ್ನಲು ಹೋದಾಗ ಬಿಲ್‌ನಲ್ಲಿ 18% ಜಿಎಸ್‌ಟಿ ಹಾಕಿ ವಸೂಲಿ ಮಾಡುತ್ತಿದ್ದರು. ಜನರು ಯುಪಿಐ ಅಥವಾ ನಗದು ಪಾವತಿಸಿದ ಬಳಿಕ ಆ ಬಿಲ್ ಸಿಸ್ಟಮ್‌ನಿಂದಲೇ ಡಿಲೀಟ್ ಆಗುತ್ತಿತ್ತು. ರೆಸ್ಟೋರೆಂಟ್‌ಗಳು ರಿಟರ್ನ್ಸ್ ಸಲ್ಲಿಸುವ ಮೊದಲು ತಮ್ಮ ಆದಾಯವನ್ನು ಕಡಿಮೆ ತೋರಿಸಲು ನಗದು ಇನ್‌ವಾಯ್ಸ್ ಎಷ್ಟು ಬೇಕೋ ಅಷ್ಟನ್ನು ಉಳಿಸಿ ಉಳಿದವುಗಳನ್ನು ಡಿಲೀಟ್ ಮಾಡುತ್ತಿದ್ದವು. ಕೆಲವು ರೆಸ್ಟೋರಂಟ್‌ಗಳು ಒಂದು, ಎರಡು ದಿನದ್ದು ಡಿಲೀಟ್ ಮಾಡಿದ್ದರೆ ಕೆಲ ಹೋಟೆಲ್‌ಗಳು ಪೂರ್ತಿ ತಿಂಗಳ ಬಿಲ್ಲಿಂಗ್ ಡೇಟಾವನ್ನು ಅಳಿಸಿ ಹಾಕಿದ್ದು ಬೆಳಕಿಗೆ ಬಂದಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು:
ರಾಜ್ಯವಾರು ದತ್ತಾಂಶದ ಪ್ರಕಾರ ಕರ್ನಾಟಕವು ಸುಮಾರು 2,000 ಕೋಟಿ ರೂ.ಗಳ ಬಿಲ್ ಡಿಲೀಟ್ ಮಾಡುವ ಮೂಲಕ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನದಲ್ಲಿ ತೆಲಂಗಾಣ(1,500 ಕೋಟಿ ರೂ.), ತಮಿಳುನಾಡು (1,200 ಕೋಟಿ ರೂ.) ಇದೆ.
ಆರಂಭದಲ್ಲಿ ಹೈದರಾಬಾದ್‌ನಲ್ಲಿರುವ ರೆಸ್ಟೋರೆಂಟ್‌ಗಳ ಮೇಲೆ ಶೋಧ ನಡೆಸಲಾಗಿತ್ತು. ಬಳಿಕ ತೆಲಂಗಾಣ ಮತ್ತು ಆಂಧ್ರಪ್ರದೇಶದ ಇತರ ಪಟ್ಟಣಗಳ ಹೋಟೆಲ್‌ಗಳ ಮೇಲೆ ದಾಳಿ ನಡೆಸಿವೆ. ಈ ವಂಚನೆಯ ಜಾಲ ವಿಸ್ತಾರಗೊಳ್ಳುತ್ತಿದ್ದಂತೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತನಿಖೆಯನ್ನು ದೇಶದ ಇತರ ಭಾಗಗಳಿಗೆ ವಿಸ್ತರಿಸಿದೆ.

