ಬೆಂಗಳೂರು: ಹೆಂಡತಿಯೊಬ್ಬಳಿಗಾಗಿ ಇಬ್ಬರು ಗಂಡಂದಿರ ನಡುವೆ ಗಲಾಟೆ ನಡೆದಿದ್ದು, ಮೊದಲನೇ ಪತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿಯ ಡಿ.ಜೆ.ಹಳ್ಳಿಯ ಕಾವಲ್ ಬೈರಸಂದ್ರದಲ್ಲಿ ನಡೆದಿದೆ.
ಕಾವಲ್ ಬೈರಸಂದ್ರ ನಿವಾಸಿ ಇರ್ಫಾನ್ ಕೊನೆಯಾದ ವ್ಯಕ್ತಿ. ಈತ ಇಲೋಪರ್ ಭಾನುಳನ್ನು ಮದುವೆಯಾಗಿದ್ದನು. ಕೆಲ ತಿಂಗಳು ಇಬ್ಬರು ತುಂಬಾ ಅನ್ಯೋನ್ಯತೆಯಿಂದ ಇದ್ದರು. ಆದರೆ ಪತ್ನಿ ಇಲೋಪರ್ ಭಾನು ಬೇರೊಬ್ಬ ಯುವಕನ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಪ್ರತಿದಿನ ಜಗಳ ಮಾಡುತ್ತಿದ್ದನು.
ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಭಾನು ಮೊದಲನೇ ಪತಿ ಇರ್ಫಾನ್‍ನನ್ನ ಬಿಟ್ಟು ತೌಸಿಫ್‍ನನ್ನು ಮದುವೆ ಆಗಿದ್ದಳು. ಇದರಿಂದ ಕೋಪಗೊಂಡ ಇರ್ಫಾನ್ ಬುಧವಾರ ರಾತ್ರಿ ತನ್ನ ಪತ್ನಿಯ ಎರಡನೇ ಗಂಡನ ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದನು. ಒಬ್ಬಳು ಹೆಂಡತಿಗಾಗಿ ನಡೆದ ಈ ಗಲಾಟೆಯಲ್ಲಿ ಎರಡನೇ ಪತಿ ತೌಸಿಪ್ ಮೊದಲನೇ ಗಂಡ ಇರ್ಫಾನ್ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಸದ್ಯಕ್ಕೆ ಈ ಕುರಿತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತೌಸಿಫ್‍ನನ್ನು ಪೊಲೀಸರು ಬಂಧಿಸಿದ್ದಾರೆ.