ಹಾಸನ: ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯ ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆನಂದ್ ಹಲ್ಲೆಗೊಳಗಾದ ಪತಿ. ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಮಾರಗೊಂಡನಹಳ್ಳಿ ಗ್ರಾಮದವರಾದ ಆನಂದ್ ಕಳೆದ 6 ವರ್ಷಗಳ ಹಿಂದೆ ರಮ್ಯಾ ಎಂಬವಳನ್ನು ಮದುವೆ ಆಗಿದ್ದಳು. ಈ ದಂಪತಿಗೆ 4 ವರ್ಷದ ಮಗಳು ಕೂಡ ಇದ್ದಾಳೆ.
ಕಳೆದ ಸೋಮವಾರ ರಾತ್ರಿ 10 ಗಂಟೆಗೆ ಪತ್ನಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ತನ್ನ ಪತಿಗೆ ನೀಡಿದ್ದಾಳೆ. ಊಟ ಮಾಡಿ ಪತಿ ಮಲಗಿದ ಬಳಿಕ ಆತನ ಕೈ-ಕಾಲುಗಳನ್ನು ಮಂಚಕ್ಕೆ ಕಟ್ಟಿದ ಪತ್ನಿ ರಮ್ಯಾ ಪ್ರಿಯಕರನೊಂದಿಗೆ ಕೊಲೆಗೆ ಯತ್ನಿಸಿದ್ದಾಳೆ ಎಂದು ಸ್ವತಃ ಪತಿಯೇ ಆರೋಪ ಮಾಡುತ್ತಿದ್ದಾನೆ.
ತನ್ನ ಕೊಲೆಗೆ ಯತ್ನಿಸಿದ್ದಾಗ ಪತಿ ಆನಂದ್ ಕಿರುಚಾಡಿದ್ದರಿಂದ, ಆತನನ್ನು ಬಿಟ್ಟು ಪ್ರಿಯಕರನೊಂದಿಗೆ ಪತ್ನಿ ಪರಾರಿಯಾಗಿದ್ದಾಳೆ. ಪತಿ ಆನಂದ್ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದು, ಈ ಬಗ್ಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.