ಮಗನ ಎದುರೇ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

Public TV
1 Min Read
Mysuru Crime

ಮೈಸೂರು: ಪತ್ನಿ (Wife) ತವರು ಮನೆಗೆ ಹೋಗಿದ್ದಕ್ಕೆ ಕೋಪಗೊಂಡ ಪತಿ ತನ್ನ ಮಗನ ಎದುರೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಹೆಚ್.ಡಿ ಕೋಟೆಯ (H.D Kote) ಹನುಮಂತ ನಗರದಲ್ಲಿ ನಡೆದಿದೆ.

ಪತಿಯ ಕ್ರೌರ್ಯದಿಂದ ಗಾಯಗೊಂಡ ಮಹಿಳೆಯನ್ನು ಮಧುರ ಎಂದು ಗುರುತಿಸಲಾಗಿದೆ. ಆಕೆಯ ಗಂಡ ಮಲ್ಲೇಶ್ ನಾಯ್ಕ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಹಿಳೆಗೆ ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವಿನ ಹೋರಾಟ ಮಾಡುತ್ತಿದ್ದಾರೆ.

ಮಲ್ಲೇಶ್ ನಾಯ್ಕ್ ಮೂಲತಃ ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಬಿಬಿ ತಾಂಡದವನು. ಕಳೆದ 8 ವರ್ಷಗಳ ಹಿಂದೆ ಅದೇ ಗ್ರಾಮದ ಮಧುರಳನ್ನ ವಿವಾಹವಾಗಿದ್ದ. ಸದ್ಯ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ.

ಮಲ್ಲೇಶ್ ಆರೇಳು ವರ್ಷಗಳಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ ( Dowry Case ) ಹಾಗೂ ಅನುಮಾನದಿಂದ ನೋಡುತ್ತಿದ್ದ. ಅಲ್ಲದೇ ಪ್ರತಿ ದಿನ ಕುಡಿದು ಬಂದು ತವರು ಮನೆಯಿಂದ ಸೈಟ್ ಕೊಡಿಸುವಂತೆ ಗಲಾಟೆ ಮಾಡುತ್ತಿದ್ದ. ಈ ನಡುವೆ ಕೆಲ ದಿನಗಳ ಹಿಂದೆ ಒಂದೆರೆಡು ದಿನಗಳ ಮಟ್ಟಿಗೆ ಮಧುರ ತವರು ಮನೆಗೆ ಹೋಗಿದ್ದರು. ಈ ವಿಚಾರವನ್ನೇ ಇಟ್ಟುಕೊಂಡು ಪತ್ನಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ.

ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article