ಗದಗ: ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ನಡೆದಿದೆ.
30 ವರ್ಷದ ಶಿವಲೀಲಾ ಪಟ್ಟೇದ್ ಪತಿಯಿಂದಲೇ ಕೊಲೆಯಾದ ದುರ್ದೈವಿ. ಆರೋಪಿ ಪತಿ ನಾಗರಾಜ್ ಪಟ್ಟೇದ್ ಕೌಟುಂಬಿಕ ಕಲಹಗಳ ಹಿನ್ನೆಲೆಯಲ್ಲಿ ಶಿವಲೀಲಾ ಮಲಗಿದ್ದ ವೇಳೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.
ಆರೋಪಿ ನಾಗರಾಜ್ ಹಲವು ದಿನಗಳಿಂದ ಪತ್ನಿಯ ಶೀಲವನ್ನು ಶಂಕಿಸಿಸುತ್ತಿದ್ದನು. ಈ ಬಗ್ಗೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜೋರಾದ ಜಗಳ ನಡೆದಿದೆ. ನಂತರ ಶಿವಲೀಲಾ ಮಲಗಿದ್ದಾರೆ. ಈ ವೇಳೆ ಪತಿ ನಾಗರಾಜ್ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಕೊಲೆ ಮಾಡಿದ ನಂತರ ತಾನೇ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಘಟನೆ ಸಂಬಂಧ ಲಕ್ಷ್ಮೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.