ಬೆಂಗಳೂರು: ಪರಸ್ತ್ರೀಯ ಆಸೆಗೆ ಬಿದ್ದು, ಪತಿ ಪತ್ನಿಗೆ ಮೋಸ ಮಾಡೋದನ್ನ ನೋಡಿದ್ದೀರಿ. ಆದರೆ ಇಲ್ಲೊಬ್ಬ ತನ್ನ ಹೆಂಡತಿಗೆ ತಿಳಿಯದಾಗೆ ವಿಚ್ಛೇದನ ನೀಡಿ ತನ್ನ ಪ್ರೇಯಸಿಯೊಂದಿಗೆ ವಿವಾಹವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸಂಜಯ್ ನಗರದಲ್ಲಿ ವಾಸವಾಗಿರುವ ವಿಜಯ್ ಕುಮಾರ್ ಪತ್ನಿಗೆ ತಿಳಿಯದಂತೆ ಬೇರೆ ಮಹಿಳೆಯನ್ನ ಮದುವೆಯಾಗಿದ್ದಾನೆ. ಕುಮಾರ್ ಬಿಎಸ್‍ಎನ್‍ಎಲ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದು, ಪ್ರಭಾ (ಹೆಸರು ಬದಲಾಯಿಸಲಾಗಿದೆ) ಅವರನ್ನು ವಿವಾಹವಾಗಿದ್ದನು. ಇವರಿಗೆ ಮದುವೆಯಾಗಿ 20 ವರ್ಷ ಕಳೆದಿದ್ದು, ಮಗಳು ಕೂಡ ಇದ್ದಾಳೆ.
ಕುಮಾರ್ ಪತ್ನಿಗೆ ಗೊತ್ತಾಗದಂತೆ ವಿಚ್ಛೇದನ ನೀಡಿದ್ದಾನೆ. ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಒಮ್ಮೆಯೂ ಕೋರ್ಟ್ ಗೆ ಹೋಗಿಲ್ಲ, ನನಗೆ ಗೊತ್ತಾಗದಂತೆ ನನ್ನ ಗಂಡ ಡೈವೋರ್ಸ್ ನೀಡಿದ್ದಾನೆ. ಅವರು ನನ್ನ ಕೈಗೆ ಡೈವೋರ್ಸ್ ಕಾಪಿ ಕೋಟ್ಟಾಗಲೇ ನನಗೆ ಗೊತ್ತಾಗಿದ್ದು, ಅಷ್ಟೇ ಅಲ್ಲದೇ ಡೈವೋರ್ಸ್ ಕಾಪಿ ಜೊತೆ ಮತ್ತೊಂದು ಮದುವೆಯಾಗಿರುವ ಮದುವೆಯ ಸರ್ಟಿಫಿಕೇಟ್ ನೀಡಿದ್ದು, ನನ್ನ ನಿನ್ನ ಸಂಬಂಧ ಮುಗಿಯಿತು. ನೀನು ಹೊರಡು ಎಂದು ಹೇಳಿದ್ದಾನೆ ಎಂದು ನೊಂದ ಮಹಿಳೆ ಹೇಳಿದ್ದಾರೆ.
ನನ್ನ ಗಂಡನಿಗೆ ವಕೀಲೆ ಗೌರಿ (ಹೆಸರು ಬದಲಾಯಿಸಲಾಗಿದೆ) ಎಂಬವರ ಜೊತೆ ಅನೈತಿಕ ಸಂಬಂಧವಿತ್ತು. ಅದನ್ನ ಲೀಗಲ್ ಮಾಡಿಕೊಳ್ಳುದ್ದಕ್ಕೆ ನನ್ನ ಬಿಟ್ಟಿದ್ದಾರೆ. ಡೈವೋರ್ಸ್ ಆರ್ಡಾರ್ ಆಗಿರುವುದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಅದನ್ನ ನನಗೆ ಕೊಟ್ಟಿರುವುದು ಕಳೆದ ಫೆಬ್ರವರಿಯಲ್ಲಿ. ನ್ಯಾಯಲಯಕ್ಕೆ ವಂಚಿಸಿ ಇವರು ಡೈವೋರ್ಸ್ ಮಾಡಿಸಿದ್ದಾರೆ ಎಂದು ನೊಂದ ಮಹಿಳೆ ಪಬ್ಲಿಕ್ ಟಿವಿಗೆ ಬಂದು ತನ್ನ ಪತಿ ಮಾಡಿರುವ ವಂಚನೆಯನ್ನ ಹೇಳಿಕೊಂಡಿದ್ದಾರೆ.
ಅಮ್ಮ ಯಾವುತ್ತು ಕೋರ್ಟ್ ಗೆ ಹೋಗಿಲ್ಲ. ಡೈವೋರ್ಸ್ ಲೆಟರ್ ಕೊಟ್ಟಾಗಲೇ ನಮಗೂ ಇದು ಗೊತ್ತಾಗಿದ್ದು. ನನಗೆ ಇಬ್ಬರೂ ಒಟ್ಟಿಗೆ ಇರಬೇಕು ಎಂದು ಮಗಳು ಹೇಳುತ್ತಿದ್ದಾರೆ.