ಬೆಂಗಳೂರು: ಪತ್ನಿ, ಅತ್ತೆ, ಮಾವ ಮತ್ತು ಪೊಲೀಸರ ಕಿರುಕುಳ ತಾಳಲಾರದೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಶ್ರೀರಾಮಪುರದ ನಿವಾಸಿ ಭರತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಹಿಂದೆ ಭರತ್ ತನ್ನ ಪತ್ನಿ ಮಂಜೇಶ್ವರಿಗೆ ಕೆಲಸಕ್ಕೆ ಹೋಗಬೇಡ, ಮನೆಯಲ್ಲೇ ಇದ್ದು ತಾಯಿ ಮತ್ತು ಮಕ್ಕಳನ್ನು ನೋಡಿಕೋ ಎಂದಿದ್ದರಂತೆ. ಇಷ್ಟಕ್ಕೇ ರಂಪಾಟ ಮಾಡಿದ ಮಂಜೇಶ್ವರಿ, ಅತ್ತೆ ಕಲಾ, ಮಾವ ಅಶೋಕ್ ಬೇರೆ ಮನೆ ಮಾಡುವಂತೆ ರಂಪಾಟ ಮಾಡಿದರು.
ಇದಕ್ಕೆ ಪತಿ ಭರತ್ ಒಪ್ಪದಿದ್ದಾಗ ರಾಜಾಜಿನಗರ ಪೊಲೀಸರಿಗೆ ದೂರು ನೀಡಿ, ಲಂಚ ನೀಡಿದ್ದಾರೆ. ಅಂತೆಯೇ ಪೊಲೀಸರು ಭರತ್ ಗೆ ಥಳಿಸಿ, ಹೆಂಡತಿ ಹೇಳಿದ ಹಾಗೆ ಕೇಳು ಇಲ್ಲ ಅಂದರೆ ಅಷ್ಟೇ ಎಂದು ಎಚ್ಚರಿಸಿ, ಕೊನೆಗೆ ಇಬ್ಬರನ್ನೂ ಬೇರೆ ಮಾಡಿ ಕಳುಹಿಸಿದ್ದಾರೆ.
ಆದರೆ 1 ವರ್ಷದ ಮಗನನ್ನು ಬಿಟ್ಟಿರಲು ಸಾಧ್ಯವಾಗದೇ ಭರತ್ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾರೆ
ವಿಡಿಯೋದಲ್ಲೇನಿದೆ?: ಪತ್ನಿ ಹಾಗೂ ನನ್ನ ಅತ್ತೆ ಮಾವ ನನಗೆ ತುಂಬಾ ಕಷ್ಟ ಕೊಟ್ಟಿದ್ದಾರೆ. ಅಲ್ಲದೇ ನನ್ನಿಂದ ನನ್ನ ಮಗುವನ್ನು ದೂರ ಮಾಡಿದ್ದಾರೆ. ಆದ್ರೆ ಮಗೂಗೆ ನಾನಿಲ್ಲದೇ ಇರಕ್ಕಾಗಲ್ಲ. ಕಳೆದ ವಾರ ನಾನು ಶಬರಿಮಲೆಗೆ ಹೋಗಿದ್ದೆ. ಆ ವೇಳೆ ನನ್ನ ಬಿಟ್ಟಿರಲಾರದೆ ಅವನಿಗೆ ಜ್ವರನೇ ಬಂದಿತ್ತು. ಅವನಿಗೆ ನನ್ನ ಬಿಟ್ಟಿರಕ್ಕಾಗಲ್ಲ. ಆದ್ರೆ ಈ ಪೊಲೀಸರು ನನ್ನಿಂದ ನನ್ನ ಮಗನನ್ನು ದೂರ ಮಾಡಿದ್ರು. ಯಾವ ಜಾಗದಲ್ಲಿ ಗಂಡಸರಿಗೆ ಬೆಲೆ ಇಲ್ಲವೋ, ಆತನಿಗೆ ಸಪೋರ್ಟ್ ಇಲ್ಲವೋ ಹಾಗೂ ಎಲ್ಲಾ ಹೆಂಗಸರಿಗೇ ಸಪೋರ್ಟ್ ಮಾಡ್ತಾರೋ.. ನನ್ನ ತಾಯಿಗೆ ಸ್ಟ್ರೋಕ್ ಆಗಿದೆ. ಹೀಗಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳು ಅಂತ ಹೇಳಿದ್ದು ತಪ್ಪಾ?. ನಾನು ಅವರನ್ನು ನೋಡಿಕೊಳ್ಳಲ್ಲ. ನನ್ನ ಬೇರೆ ಮನೆ ಮಾಡಿ ಕರೆದುಕೊಂಡು ಹೋಗು ಅಂತಾ ಪತ್ನಿ ಹೇಳಿದ್ಳು. ತಂದೆ ತಾಯಿನೂ ನನ್ನ ಬಳಿ ಜಗಳ ಆಡಿದ್ರು ಅಂತ ವಿಡಿಯೋ ಮೂಲಕ ತನ್ನ ದುಃಖ ತೋಡಿಕೊಂಡಿದ್ದಾರೆ.