– ಡೆತ್‌ನೋಟ್ ಬರೆದಿಟ್ಟು ಹೊಳೆಗೆ ಹಾರಿದ ಸರ್ವೆ ಇಲಾಖೆ ನೌಕರ
ದಾವಣಗೆರೆ: ಪತ್ನಿ (Wife) ತನ್ನ ಹಳೆಯ ಪ್ರಿಯಕರನೊಂದಿಗೆ ಸಂಬಂಧ ಮುಂದುವರೆಸಿದ್ದಕ್ಕೆ ಪತಿ (Husband) ಆತ್ಮಹತ್ಯೆಗೆ ಶರಣಾದ ಘಟನೆ ನ್ಯಾಮತಿ (Nyamati) ತಾಲೂಕಿನ ಹೆಚ್ ಕಡದಕಟ್ಟೆ ಗ್ರಾಮದ ಬಳಿ ನಡೆದಿದೆ.
ಸರ್ವೆ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿದ್ದ ಮಣಿಕಂಠ (28) ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಮೂರು ತಿಂಗಳ ಹಿಂದಷ್ಟೇ ರಾಣೇಬೆನ್ನೂರು ಮೂಲದ ಮಹಿಳೆಯನ್ನು ಮಣಿಕಂಠ ಮದುವೆಯಾಗಿದ್ದರು. ಮದುವೆಯಾಗಿ ಮೂರು ತಿಂಗಳ ಬಳಿಕ ಪತ್ನಿ ಆಕೆಯ ಹಳೆಯ ಪ್ರಿಯಕರನ ಜೊತೆ ಸಂಬಂಧ ಬೆಳೆಸಿದ್ದಳು. ಈ ಬಗ್ಗೆ ತಿಳುವಳಿಕೆ ಹೇಳಿದ್ದರೂ ಸಹ ಆಕೆ ಸಂಬಂಧ ಮುಂದುವರಿಸಿದ್ದಳು. ಇದರಿಂದ ಮನನೊಂದು ಅವರು ಡೆತ್‌ನೋಟ್ ಬರೆದಿಟ್ಟು ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಲೆಗೈದ ಮಗನಿಗೆ ಜೀವಾವಧಿ ಶಿಕ್ಷೆ
ಜು.17ರ ಸಂಜೆ ಮಣಿಕಂಠ ಅವರು ನಾಲೆಗೆ ಹಾರಿದ್ದಾರೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ನ್ಯಾಮತಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ತುಂಗಾ ನಾಲೆಯಲ್ಲಿ ಮೃತದೇಹಕ್ಕೆ ಹುಡುಕಾಟ ನಡೆಸಲಾಗಿತ್ತು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸಗಟೂರು ಗ್ರಾಮದ ಬಳಿ ಮಣಿಕಂಠ ಅವರ ಮೃತದೇಹ ಪತ್ತೆಯಾಗಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
ನನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನಿಂದ ಸಾಕಷ್ಟು ನೊಂದಿದ್ದೇನೆ. ನನಗೆ ನಾನು ಮಾಡಿಕೊಂಡ ಮೋಸದಿಂದ ಈ ನಿರ್ಧಾರಕ್ಕೆ ಬರುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಹೊರೆತು, ಬೇರೆ ಯಾರೂ ಅಲ್ಲ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಕುಟುಂಬಸ್ಥರು ಮಣಿಕಂಠ ಅವರ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ನ್ಯಾಮತಿ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅಪಘಾತಕ್ಕೆ ವ್ಯಕ್ತಿ ಬಲಿ
