ಚಂಡೀಘಡ್: 38 ವರ್ಷದ ವ್ಯಕ್ತಿಯೊಬ್ಬ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂಡೀಗಢದ ಬಾಮುವಾಲ್‍ನಲ್ಲಿ ನಡೆದಿದೆ.
ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪತಿ. ಈತ ಜೀವನಕ್ಕಾಗಿ ಮರಗೆಲಸ ಕೆಲಸ ಮಾಡಿಕೊಂಡಿದ್ದನು. ಮೂವರು ಮಕ್ಕಳ ತಂದೆಯಾಗಿರುವ ಸಿಂಗ್ ಶುಕ್ರವಾರ ತಮ್ಮ ಮನೆಯಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಸಿಂಗ್ ಪತ್ನಿಯನ್ನು ಸರಬ್ಜಿತ್ ಕೌರ್ ಎಂದು ಗುರುತಿಸಲಾಗಿದೆ. ಮೃತ ಸಿಂಗ್ ತಾಯಿ, ಸರಬ್ಜಿತ್ ಕೌರ್, ಆಕೆಯ ಪ್ರಿಯಕರ ಗೋಪಿ, ಆತನ ಸ್ನೇಹಿತರಾದ ಗುಪ್ರ್ರೀತ್ ಸಿಂಗ್ ಮತ್ತು ಲಾಧಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಮಗ ಇತ್ತೀಚೆಗೆ ಗೋಪಿಯ ಮನೆಯಲ್ಲಿ ಮರಗೆಲಸವನ್ನು ಪೂರ್ಣಗೊಳಿಸಿದ್ದನು. ಗುರುವಾರ ಕೆಲಸದ ಹಣವನ್ನು ಪಡೆಯಲು ಹೋಗಿದ್ದನು. ಆಗ ಗೋಪಿ ಮತ್ತು ಅವನ ಸ್ನೇಹಿತರು ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಮಾತನಾಡಿ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೇ ಹಣವನ್ನು ಕೊಡುವುದಕ್ಕೂ ನಿರಾಕರಿಸಿದ್ದರು. ಈ ಘಟನೆಯಿಂದ ಖಿನ್ನತೆಗೆ ಒಳಗಾದ ಅವನು ಶುಕ್ರವಾರ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಿಂಗ್ ತಾಯಿ ಪ್ರೀತಮ್ ಕೌರ್ ಹೇಳಿದ್ದಾರೆ.
ಸದ್ಯಕ್ಕೆ ಸಿಂಗ್ ತಾಯಿ ಅವರು ನೀಡಿರುವ ದೂರಿನ ಅನ್ವಯ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆದರೆ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ತನಿಖೆ ನಡೆಯುತ್ತಿದೆ ಎಂದು ಇನ್ಸ್ ಪೆಕ್ಟರ್ ಸೋಮ್ ನಾಥ್ ತಿಳಿಸಿದ್ದಾರೆ.