ಶಿವಮೊಗ್ಗ: ಪಾಪಿ ತಂದೆಯೋರ್ವ ಮಗಳ ಮೇಲೆಯೇ ನಿರಂತರ ಅತ್ಯಾಚಾರ ನಡೆಸಿದ್ದು, ಕೊನೆಗೆ ತಾಯಿಯ ಉಪಾಯದಿಂದ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗದ ಗೋವಿಂದಪುರದಲ್ಲಿ ನಡೆದಿದೆ.
ಘಟನೆ ವಿವರ: ಮೂಲತಃ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ನಿವಾಸಿಯಾಗಿರುವ ಆರೋಪಿ, ತನ್ನ ಗ್ರಾಮದಲ್ಲಿಯೇ ಶುಂಠಿ ವ್ಯಾಪಾರ ಮಾಡಿಕೊಂಡಿದ್ದ. ಈತನಿಗೆ ಮಗಳು ಸೇರಿದಂತೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ದುರುಳ ತಂದೆ, ಮಗಳ ಮೇಲೆ ಕಳೆದ ಹಲವು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ತನ್ನ ತಂದೆಯ ದುಷ್ಕೃತ್ಯವನ್ನು ಮಗಳು ತಾಯಿಗೂ ಹೇಳದೆ ಸಹಿಸಿಕೊಂಡಿದ್ದಳು. ಇದನ್ನೂ ಓದಿ: ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಮಂತ್ರವಾದಿ – ಹಣ, ಚಿನ್ನಾಭರಣ ಮಾಯ ಮಾಡಿದ್ದೇನೆ ಎಂದ!
ತಂದೆಯ ಕಾಟ ವಿಪರೀತವಾದಾಗ ಅನಿವಾರ್ಯವಾಗಿ ಆತನ ನೀಚ ಕೆಲಸವನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ತಾಯಿ ತನ್ನ ಮಗಳಿಗೆ ಗಂಡು ಹುಡುಕಿ ವಿವಾಹ ಮಾಡುವ ಯೋಚನೆ ಮಾಡುತ್ತಾರೆ. ಓರ್ವ ಹುಡುಗನನ್ನೂ ಹುಡುಕಿ ಕಳೆದ 15 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡುತ್ತಾರೆ. ಆದರೆ ತನ್ನ ಮಗಳಿಗೆ ಯಾವಾಗ ವಿವಾಹ ನಿಶ್ಚಿತಾರ್ಥವಾಯಿತೋ ಆಗ ತಂದೆ, ಮಗಳಿಗೆ ಮದುವೆ ಆಗದಂತೆ ಬೆದರಿಕೆ ಹಾಕುತ್ತಾನೆ.
ತಂದೆಯೇ ತನ್ನ ಮಗಳಿಗೆ ಬೆದರಿಕೆ ಹಾಕಿದ್ದರಿಂದ ಬೇರೆ ದಾರಿ ಕಾಣದೇ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾರೆ. ಅದರಂತೆ ಯುವತಿ ತಾಯಿ ಶಿವಮೊಗ್ಗದ ಗೋವಿಂದಪುರದಲ್ಲಿ ಇರುವ ತನ್ನ ಸಹೋದರಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತಿಳಿಸುತ್ತಾರೆ. ಆಗ ಅವರು ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ಗೋವಿಂದಪುರಕ್ಕೆ ಬರುವಂತೆ ತಿಳಿಸಿ, ಊರಿಗೆ ಕರೆಯಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಕರಡಿ ಬಾಯಿಗೆ 3 ವರ್ಷದ ಮಗಳನ್ನೇ ನೂಕಿದ ತಾಯಿ!
ಈ ವೇಳೆ ಯುವತಿಯ ದೊಡ್ಡಮ್ಮ, ನಿಮ್ಮ ಪತ್ನಿ ಮತ್ತು ಮಕ್ಕಳು ಕಾಣುತ್ತಿಲ್ಲವೆಂದು ಆರೋಪಿಯನ್ನು ಗೋವಿಂದಪುರಕ್ಕೆ ಕರೆಯಿಸಿಕೊಂಡಿದ್ದಾರೆ. ಬಳಿಕ ಶಿವಮೊಗ್ಗದ ಮಹಿಳಾ ಪೊಲೀಸರಿಗೆ ವಿಷಯ ತಿಳಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.