ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಾದ್ಯಂತ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ಕೋವಿಡ್ ಲಸಿಕೆ ನೀಡುವಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ ಹುಕ್ಕೇರಿ ತಾಲೂಕು 100ಕ್ಕೆ ನೂರು ಸ್ಥಾನ ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಉದಯ ಕುಡಚಿ ಹೇಳಿದರು.
Advertisement
ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ 18 ವರ್ಷ ಮೇಲ್ಪಟ್ಟವರಿಗೆ 2,97,145 ಜನರಿಗೆ ಲಸಿಕೆ ನೀಡುವ ಗುರಿ ಇಡಲಾಗಿತ್ತು. ಆದರೆ ಇಲ್ಲಿ 2,97,378 ಜನರಿಗೆ ಮೊದಲನೇ ಡೋಸ್ ಲಸಿಕೆ ನೀಡಿರುವ ಹೆಗ್ಗಳಿಕೆಗೆ ಹುಕ್ಕೇರಿ ತಾಲೂಕು ಪಾತ್ರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ- ಪೊಲೀಸರ ತನಿಖೆಯಿಂದ ಬಯಲು
Advertisement
Advertisement
2,16,939 ಜನರಿಗೆ ಎರಡನೇ ಲಸಿಕೆ ನೀಡಿದ್ದು, ಶೇ.73ರಷ್ಟು ಪ್ರಗತಿ ಸಾಧಿಸಲಾಗಿದೆ. ತಾಲೂಕಿನಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ ಶ್ರಮಿಸಿದ್ದಾರೆ ಎಂದರು.
Advertisement
ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ರೋಗ ನಿರೋಧಕ ಹೆಚ್ಚಿರುವುದು ಈಗಾಗಲೇ ದೃಢಪಟ್ಟಿದೆ. ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಈ ಬಾರಿ ಲಸಿಕಾ ಅಭಿಯಾನದಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈಗಳ ಶುಚಿತ್ವ ನಮ್ಮ ಜೀವನ ಶೈಲಿಯ ಅಂಗವಾಗಬೇಕು. ಜನದಟ್ಟಣೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವುದು ಮತ್ತು ಅಂತಹ ಕಾರ್ಯಕ್ರಮಗಳನ್ನು ಸಂಘಟಿಸದೇ ಸರಳ ಆಚರಣೆಗೆ ಆದ್ಯತೆ ನೀಡುವುದು ಅಪಾಯದಿಂದ ಪಾರಾಗುವ ಪ್ರಮುಖ ದಾರಿ ಎಂದು ಹೇಳಿದರು. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್
ಈ ವೇಳೆ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಹಾಂತೇಶ್ ನರಸನ್ನವರ, ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದತ್ತಾತ್ರೇಯ ದೊಡಮನಿ, ಅಮ್ಮಣಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯಾ ಸಜ್ಜನ ಮತ್ತಿತರರು ಉಪಸ್ಥಿತರಿದ್ದರು.