ಹುಬ್ಬಳ್ಳಿ: ರೈತರಿಗೆ ಅನುಕೂಲವಾಗುವಂತೆ ಪಿಎಲ್‍ಡಿ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
Advertisement
ಇಂದು ಹುಬ್ಬಳ್ಳಿಯ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆ ವಿಶೇಷ ಹೆಲಿಕಾಪ್ಟರ್ ಮೂಲಕ ವಿಮಾನ ನಿಲ್ದಾಣಕ್ಕೆ ಬಂದ ಸಿಎಂ ಬಿಎಸ್‍ವೈ ಮಾಧ್ಯಮಗಳ ಜೊತೆ ಮಾತನಾಡಿದರು. ಹಲವು ವರ್ಷಗಳಿಂದ ರೈತರು ಸಾಲದ ಒತ್ತಡದಲ್ಲಿ ಸಿಲುಕಿದ್ದು, ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಕಟ್ಟಲಾಗದ ಸ್ಥಿತಿಯಲ್ಲಿ ಇದ್ದಾರೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ 400 ಕೋಟಿ ರೂಪಾಯಿಗಳ ಬಾರ ಬೀಳುವುದು. ಮಾರ್ಚ್ ಅಂತ್ಯದ ಒಳಗಾಗಿ ಸಾಲ ಮರುಪಾವತಿಸುವ ರೈತರಿಗೆ ರಿಯಾಯಿತಿಯನ್ನು ಸಹ ನೀಡಲು ಯೋಚಿಸಲಾಗುತ್ತಿದೆ. ಮಾರ್ಚ್ 05ರಂದು ರಾಜ್ಯ ಬಜೆಟ್ ಮಂಡಿಸುವ ಸಲುವಾಗಿ ಸಿದ್ಧತೆಗಳು ಆರಂಭವಾಗಿವೆ. ರೈತ ಸ್ನೇಹಿ ಬಜೆಟ್ ಮಂಡಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
Advertisement
Advertisement
ನೂತನ ಸಚಿವರ ಖಾತೆ ಹಂಚಿಕೆ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರ ಖಾತೆಗಳನ್ನು ಹಂಚಿಕೆ ಮಾಡಿ ಜವಬ್ದಾರಿ ವಹಿಸಲಾಗುವುದು. ಮಹಾದಾಯಿ ವಿಚಾರ ಸುಪ್ರಿಂ ಕೋರ್ಟಿನಲ್ಲಿದ್ದು, ರಾಜ್ಯದ ಅಡ್ವಕೇಟ್ ಜನರಲ್ ಅವರಿಗೆ ಮೇಲ್ಮನವಿ ಸಲ್ಲಿಸಲು ನಿರ್ದೇಶನ ನೀಡಿದ್ದೇನೆ. ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ರಾಜ್ಯ ಬಜೆಟ್‍ನಲ್ಲಿ ಮಹದಾಯಿ ಯೋಜನೆಗೆ ಹಣ ಮೀಸಲಿರಿಸಲಾಗುವುದು. ಯಾವುದೇ ನೂತನ ಜಿಲ್ಲೆಯ ರಚನೆ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.
Advertisement
ಹುಬ್ಬಳ್ಳಿಗೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದಿಂದ ಗೌರವ ರಕ್ಷೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿಗಳ ಕಾನೂನು ಸಲಹರಗಾರ ಮೋಹನ್ ಲಿಂಬಿಕಾಯಿ, ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಸಿ.ಎಂ ನಿಂಬಣ್ಣನವರ, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ದಿಲೀಪ್.ಆರ್, ಜಿ.ಪಂ ಸಿಇಓ ಡಾ.ಬಿ.ಸಿ ಸತೀಶ್, ಉಪವಿಭಾಗಾಧಿಕಾರಿ ಮೊಹಮ್ಮದ್ ಜುಬೇರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.