ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ‘ಗನ್ಸ್ ಅಂಡ್ ರೋಸಸ್’. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟೀಸರ್ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಯುವ ಸಮುದಾಯಕ್ಕೆ ಹತ್ತಿರಾಗುವ, ಕುಟುಂಬ ಸಮೇತರಾಗಿ ನೋಡುವಂಥಾ ಗುಣ ಲಕ್ಷಣಗಳನ್ನು ಹೊಂದಿರುವ, ಸಾಮಾಜಿಕ ಸಂದೇಶವನ್ನು ಪಕ್ಕಾ ಕಮರ್ಶಿಯಲ್ ಜಾಡಿನಲ್ಲಿ ರವಾನಿಸಿರುವ ‘ಗನ್ಸ್ ಅಂಡ್ ರೋಸಸ್’ ಮುಂದಿನ ತಿಂಗಳು, ಜನವರಿ 3ರಂದು ಅದ್ಧೂರಿಯಾಗಿ ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ತೆರೆಕಾಣಲಿದೆ. ಈ ಮೂಲಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರ 25 ವರ್ಷಗಳ ಸಿನಿಮಾ ಯಾನ ಸಾರ್ಥಕ ಕಾಣುವ ಘಳಿಗೆ ಹತ್ತಿರವಾಗಿದೆ.
Advertisement
ಟೀಸರ್ ಮೂಲಕ ‘ಗನ್ಸ್ ಅಂಡ್ ರೋಸಸ್’ (Guns And Roses) ಆಂತರ್ಯದ ಕಸುವಿನ ಅನಾವರಣವಾಗಿದೆ. ಈ ಮೂಲಕ ಒಂದಷ್ಟು ಭರವಸೆಯೂ ಮೂಡಿಕೊಂಡಿದೆ. ಹೊಸಬರು ಮತ್ತು ಅನುಭವಿಗಳ ಸಮಾಗಮದಂತಿರುವ ತಂಡವೊಂದು ಹೊಸ ವರ್ಷದ ಹೊಸ್ತಿಲಲ್ಲಿಯೇ ಗೆಲುವು ದಾಖಲಿಸುವ ನಿರೀಕ್ಷೆಗಳೂ ಮೂಡಿಕೊಂಡಿವೆ. ಇದೆಲ್ಲವನ್ನೂ ಕಂಡು ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಥ್ರಿಲ್ ಆಗಿದ್ದಾರೆ. ಯಾಕೆಂದರೆ, ಈ ಸಿನಿಮಾದೊಂದಿಗೆ ನಿರ್ದೇಶಕರಾಗುವ ಕನಸೊಂದು ನನಸಾಗಿದೆ. ಇದಕ್ಕಾಗಿ ಅವರು ಭರ್ತಿ 25 ವರ್ಷಗಳನ್ನು ಪಣವಾಗಿಸಿದ್ದಾರೆ. ಪೊಲೀಸ್ ಸ್ಟೋರಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅವರು ಕನಸಿನ ಹಾದಿಯಲ್ಲಿ ಮೊದಲ ಹೆಜ್ಜೆಯಿಟ್ಟಿದ್ದರು. ಆ ಬಳಿಕ ನೂರಾರು ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿ ಕಡೆಗೂ ‘ಗನ್ಸ್ ಅಂಡ್ ರೋಸಸ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
Advertisement
Advertisement
ಹೀಗೆ ಸುದೀರ್ಘ ಕಾಲಾವಧಿಯವರೆಗೂ ಅವುಡುಗಚ್ಚಿ ಕಾದಿದ್ದ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರ ಪಾಲಿಗೆ ಮೊದಲ ಚಿತ್ರವೇ ಬಹುಭಾಷಾ ಚಿತ್ರವಾಗುವಂಥಾ ಸುಯೋಗವೂ ಲಭಿಸಿದೆ. ಈಗಿನ ಜನರೇಷನ್‌ನ ಹುಡುಗರನ್ನು ಸಂಪೂರ್ಣವಾಗಿ ಸೆಳೆಯುತ್ತಲೇ, ಎಲ್ಲ ವರ್ಗದ ಪ್ರೇಕ್ಷಕರ ಪಾಲಿಗೂ ರುಚಿಸುವ ಸಿನಿಮಾ ರೂಪಿಸಿದ ತುಂಬು ತೃಪ್ತಿಯೂ ಅವರಲ್ಲಿದೆ. ಈ ಇಪ್ಪತೈದು ವರ್ಷಗಳ ಯಾನದಲ್ಲಿ ಅವರ ಪಾಲಿಗೆ ಪ್ರೇಕ್ಷಕರ ನಾಡಿ ಮಿಡಿತದ ಅರಿವಾಗಿದೆ. ಕಾಲದಿಂದ ಕಾಲಕ್ಕೆ ಅಪ್‌ಡೇಟ್ ಆಗುತ್ತಾ ಸಾಗುವ ಮನಃಸ್ಥಿತಿಯೂ ಸಿದ್ಧಿಸಿದೆ. ಈ ಎಲ್ಲ ಅನುಭವಗಳನ್ನು ಧಾರೆಯೆರೆದು ಒಂದೊಳ್ಳೆ ಸಿನಿಮಾ ಕಟ್ಟಿ ಕೊಟ್ಟ ಧನ್ಯತಾ ಭಾವ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರಲ್ಲಿದೆ.
Advertisement
ಇಷ್ಟೂ ವರ್ಷಗಳ ಕಾಲ ಹಲವಾರು ಘಟಾನುಘಟಿ ಕಲಾವಿದರೊಂದಿಗೆ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರು ಒಡನಾಡಿದ್ದಾರೆ. ಇದರ ಫಲವಾಗಿಯೇ ಸದರಿ ಚಿತ್ರದ ಪಾತ್ರಗಳಿಗೆ ಒಪ್ಪುವಂಥಾ ಕಲಾವಿದರೇ ಸಿಗಲು ಸಾಧ್ಯವಾಗಿದೆ. ನಟರಾದ ಕಿಶೋರ್, ಶೋಭರಾಜ್, ಅವಿನಾಶ್ ಇಲ್ಲಿ ಪ್ರಧಾನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದರಲ್ಲಿ ನಟಿಸುವ ಕೋರಿಕೆಯನ್ನು ಇವರ ಮುಂದಿಟ್ಟಾಗ ರೇಟಿನ ಬಗ್ಗೆ ಮಾತಾಡದೆ, ಡೇಟ್ ಯಾವತ್ತೆಂದು ಕೇಳುವ ಔದಾರ್ಯ ಮೆರೆದ ಈ ನಟರೆಲ್ಲರ ಬಗ್ಗೆ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರಲ್ಲೊಂದು ಕೃತಜ್ಞತಾ ಭಾವವಿದೆ.
ಸ್ಯಾಂಡಲ್‌ವುಡ್‌ನಲ್ಲಿಯೂ ಡ್ರಗ್ಸ್ ವಿಚಾರದ ಸದ್ದಾಗಿದ್ದ ಘಳಿಗೆಯಲ್ಲಿಯೇ ಈ ಚಿತ್ರದ ಕಥೆ ಕಾವುಗಟ್ಟಿಕೊಂಡಿತ್ತು. ಶರತ್ ಬರೆದ ಈ ಕಥೆ ಸಮಾಜವನ್ನು ಸರಿದಿಕ್ಕಿನಲ್ಲಿ ಸಾಗಿಸುವಂಥಾ ಸಂದೇಶವೂ ಇದೆ. ಅದೆಲ್ಲವನ್ನೂ ಪಕ್ಕಾ ಮನೋರಂಜನೆ ಮತ್ತು ಕಮರ್ಶಿಯಲ್ ಅಂಶಗಳೊಂದಿಗೆ ಸಮರ್ಥವಾಗಿ ದೃಶ್ಯೀಕರಿಸಿದ ತೃಪ್ತಿ ನಿರ್ದೇಶಕರದ್ದು. ಮೈಸೂರಿನ ಹುಣಸೂರು ಭಾಗದವರಾದ ನಿರ್ದೇಶಕರಿಗೆ ಆರಂಭದಿಂದಲೂ ಸಿನಿಮಾಸಕ್ತಿ ಇತ್ತು. ಅಲ್ಲಿಂದಲೇ ಸಿನಿಮಾ ರಂಗಕ್ಕೆ ತೆರಳಿ ಸಾಧಿಸಿದ್ದವರನ್ನೆಲ್ಲ ಬೆರಗುಗಣ್ಣಿನಿಂದ ನೋಡುತ್ತಾ ಬಂದಿದ್ದ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಇದೀಗ ತಾವೇ ಎಲ್ಲರ ಗಮನ ಸೆಳೆದಿದ್ದಾರೆ. 25 ವರ್ಷಗಳಿಂದ ಇವರನ್ನು ನೋಡುತ್ತಾ ಬಂದಿದ್ದ ನಿರ್ಮಾಪಕ ಎಚ್.ಆರ್ ನಟರಾಜ್ ಕೂಡಾ ಆ ನಂಬಿಕೆಯಿಂದಲೇ ನಿರ್ದೇಶನದ ಜವಾಬ್ದಾರಿ ವಹಿಸಿದ್ದರು. ಅದನ್ನು ಉಳಿಸಿಕೊಳ್ಳುವಂಥಾ ಸಿನಿಮಾ ಮಾಡಿದ ಖುಷಿ ನಿರ್ದೇಶಕರಲ್ಲಿದೆ. ಈ ಚಿತ್ರ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.
ಈಗ ವಾತಾವರಣ ಬದಲಾಗಿದೆ. ಸಿನಿಮಾ ರಂಗಕ್ಕೆ ಪ್ರವೇಶ ಪಡೆಯೋದು ಸೇರಿದಂತೆ ಎಲ್ಲವೂ ಸಲೀಸಾಗಿದೆ. ಆದರೆ, ಎಂಟ್ರಿ ಕೊಡೋದೇ ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಸಿನಿಮಾ ರಂಗಕ್ಕೆ ಬಂದು, ಇಪ್ಪತೈದು ವರ್ಷಗಳ ಕಾಲ ಅಲ್ಲಿಯೇ ಮುಂದುವರೆದಿರುವವರು ಹೆಚ್.ಎಸ್ ಶ್ರೀನಿವಾಸ್ ಕುಮಾರ್. ಆ ಸುದೀರ್ಘ ಅನುಭವಗಳ ಬಲದಿಂದಲೇ ಅವರು ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಟೀಸರ್‌ಗೆ ಸಿಗುತ್ತಿರುವ ಭರಪೂರ ಮೆಚ್ಚುಗೆ ಅವರೊಳಗಿನ ಭರವಸೆಯನ್ನು ಇಮ್ಮಡಿಗೊಳಿಸಿದೆ. ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ (Ajay Kumar) ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ (Yashika Nishkala) ಅರ್ಜುನ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ.