– ಜಮೀರ್ ಬಿಡ್ಡಿಂಗ್ ಕಾರಣಕ್ಕೆ ಪವನ್ ನೆಜ್ಜೂರ್ ಬಲಿ: ಸಚಿವೆ ಆರೋಪ
ಬೆಂಗಳೂರು: ಜಮೀರ್ ಅಹ್ಮದ್ ಖಾನ್ ಬಿಡ್ಡಿಂಗ್ ಕಾರಣಕ್ಕೆ ಪವನ್ ನೆಜ್ಜೂರ್ ಬಲಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha karandlaje) ಆರೋಪಿಸಿದ್ದಾರೆ.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಅಹಿತಕರ ಘಟನೆ (Ballari Clash) ನಡೆದಾಗ ಪವನ್ ನೆಜ್ಜೂರ್ ಅವರು ಸ್ಥಳದಲ್ಲಿದ್ದರೆಂದು ಲೈವ್ ಬರುತ್ತಿದೆ. ಸರ್ಕಾರ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದರು. ಅಲ್ಲದೇ ಬಳ್ಳಾರಿಯನ್ನು ನೀವೇನು ಮಾಡಲು ಹೊರಟಿದ್ದೀರಿ ಜಮೀರ್ ಖಾನ್ ಅವರೇ? ಅಧಿಕಾರಿಗಳನ್ನ ಬಲಿ ಪಡೆಯುವುದನ್ನು ಮೊದಲು ನಿಲ್ಲಿಸಿ ಎಂದು ಆಗ್ರಹಿಸಿದರು.
ಪವನ್ ನೆಜ್ಜೂರ್ ಅವರ ಡೆತ್ ನೋಟಿನಲ್ಲಿ ಏನಿದೆ?
ಎಸ್ಪಿ ಪವನ್ ನೆಜ್ಜೂರ್ (Pavan Nejjuru) ಅವರ ಅಮಾನತು ಆದೇಶಕ್ಕೆ ಸರಕಾರ ಉತ್ತರ ಕೊಡಬೇಕು. ಪವನ್ ನೆಜ್ಜೂರ್ ಅವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸರಕಾರ ಉತ್ತರ ನೀಡಬೇಕು. ಪವನ್ ನೆಜ್ಜೂರ್ ಅವರ ಡೆತ್ ನೋಟಿನಲ್ಲಿ ಏನಿದೆ? ಎಂಬುದನ್ನು ಬಹಿರಂಗ ಪಡಿಸಬೇಕು. ಇದರಲ್ಲಿ ಶಾಮೀಲಾದ ಅಧಿಕಾರಿಗಳು, ಯಾರ ಹೆಸರು ಬರೆದಿಟ್ಟಿದ್ದಾರೆ ಎಂಬುದು ಬಹಿರಂಗಕ್ಕೆ ತನ್ನಿ ಎಂದು ಒತ್ತಾಯಿಸಿದರು.
ಎಫ್‍ಐಆರ್ ಆಗಿರುವ ಭರತ್ ರೆಡ್ಡಿ ಜೊತೆ ಕುಳಿತು ಮುಖ್ಯಮಂತ್ರಿಗಳು ಮಾತಾಡಿದ್ದು ಸರಿಯೇ? ಇದಕ್ಕೆ ಉತ್ತರ ಕೊಡುವವರು ಯಾರು? ಸಿಎಂ, ಅಪರಾಧಿಗಳ ಜೊತೆ ಕುಳಿತರೆ ನ್ಯಾಯ ಹೇಗೆ ಸಿಗುತ್ತದೆ? ಯಾರ ಹತ್ತಿರ ನ್ಯಾಯ ಕೇಳಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಎಸ್ಪಿ ಪವನ್ ನೆಜ್ಜೂರ್ ಡೆತ್‌ನೋಟ್ ಮುಚ್ಚಿಟ್ಟಿದೆ: ಶೋಭಾ ಕರಂದ್ಲಾಜೆ ಬಾಂಬ್
ನೇಮಕಾತಿ, ಬಡ್ತಿ, ವರ್ಗಾವಣೆಯಲ್ಲಿ ಗೋಲ್ಮಾಲ್
ಈ ಎಲ್ಲ ಅಂಶಗಳು ಹೊರಕ್ಕೆ ಬರಬೇಕಿದೆ. ನಮ್ಮ ಪೊಲೀಸ್ ವ್ಯವಸ್ಥೆಗೆ ದೇಶದಲ್ಲಿ ಒಳ್ಳೆಯ ಹೆಸರಿದೆ. ಇದನ್ನು ಬಿಗಡಾಯಿಸುತ್ತಿರುವುದು ಕಾಂಗ್ರೆಸ್ ಸರಕಾರ. ಭ್ರಷ್ಟಾಚಾರ ಇಲ್ಲದೇ ವರ್ಗಾವಣೆ ಆಗುವುದಿಲ್ಲ. ಭ್ರಷ್ಟಾಚಾರ ಇಲ್ಲದೇ ಬಡ್ತಿ ಆಗುವುದಿಲ್ಲ. ಭ್ರಷ್ಟಾಚಾರ ಇಲ್ಲದೇ ನೇಮಕಾತಿ ಆಗುವುದಿಲ್ಲ. ಈ ಹಂತಕ್ಕೆ ಸರಕಾರವನ್ನ ನೀವು ಒಯ್ದಿದ್ದೀರಿ. ಬೆಂಗಳೂರು- ಬೆಂಗಳೂರಿನ ಆಚೆಗೂ ಅದೇ ಕಥೆ. ಅದನ್ನು ಸಂಗ್ರಹಿಸಲು ನಮ್ಮ ಅಧಿಕಾರಿಗಳು 11 ತಿಂಗಳು ಪರದಾಡಬೇಕು. ಮತ್ತೆ ಹೊಸ ದುಡ್ಡು ಕೊಡಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರ ಮನೆಗೆ ಎಷ್ಟು? ಮುಖ್ಯಮಂತ್ರಿ ಮನೆಗೆ ಎಷ್ಟು? ಯಾವ ಸಚಿವರಿಗೆ ಎಷ್ಟು? ಆಯಾ ಕಾಂಗ್ರೆಸ್ ಶಾಸಕನಿಗೆ ಎಷ್ಟು? ಎಂಬ ಪರಿಸ್ಥಿತಿ ಇದೆ. ಇದು ಕರ್ನಾಟಕದಲ್ಲಿ ನಡೆಯುತ್ತಿದೆ. ಜನರು, ಅಧಿಕಾರಿಗಳೂ ಬೇಸತ್ತಿದ್ದಾರೆ. ನಿಮ್ಮ ಅಧಿಕಾರಿಗಳನ್ನು ಕೂರಿಸಿಕೊಂಡು ಕಷ್ಟ ಕೇಳಿ ಸಿದ್ದರಾಮಯ್ಯನವರೇ ಎಂದು ಒತ್ತಾಯಿಸಿದರು. ನೀವು ಯಾವತ್ತೂ ಅಧಿಕಾರಿಗಳ ಸಭೆ ನಡೆಸಿದ್ದೀರಿ? ಎಲ್ಲಿ ಜಿಲ್ಲಾ ಸಭೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಂಗಳೂರು| ರೋಡ್ ಸೈಡ್ ಪಾರ್ಕಿಂಗ್‌ಗೆ ಕಟ್ಟಬೇಕು ಕಾಸು – ಜಿಬಿಎ ಪೇ & ಪಾರ್ಕಿಂಗ್ ರೂಲ್ಸ್ ಶೀಘ್ರ ಜಾರಿ?
ವಿಮಾನ ನಿಲ್ದಾಣದಿಂದ ಬರುವಾಗ ಬ್ರಿಡ್ಜ್ ಮೇಲೆಯೂ ಟ್ರಾಫಿಕ್ ಯಾಕೆಂದು ಮೊನ್ನೆ ಅಧಿಕಾರಿಯೊಬ್ಬರನ್ನ ಪ್ರಶ್ನಿಸಿದ್ದೆ. ಬ್ರಿಡ್ಜ್ ಮೇಲೆಯೂ ವಾಹನ ನಿಲ್ಲಿಸಿ ಸಂಗ್ರಹ ಮಾಡುತ್ತಾರೆ. ಯಾಕೆ ಅಂತ ಕೇಳಿದರೆ ‘ನಾವು ಮಂತ್ಲಿ ಪೇಮೆಂಟ್ ಮಾಡಬೇಕು’ ಎಂದು ಉತ್ತರಿಸಿದರು. ಸಂಗ್ರಹ ಮಾಡದೇ ಇದ್ದರೆ ನೀವು ಕೊಡುತ್ತೀರಾ ಎಂದು ತಮಾಷೆಗೆ ಆ ಅಧಿಕಾರಿ ಕೇಳಿದರು ಎಂದು ಗಮನ ಸೆಳೆದರು.
ಹುದ್ದೆ ಉಳಿಸಿಕೊಳ್ಳಲು ಅಧಿಕಾರಿಗಳ ಬಿಡ್ಡಿಂಗ್
ನೀವು ನಿಮ್ಮ ಗೂಂಡಾ ಶಾಸಕರನ್ನ ರಕ್ಷಿಸಲು ಹೊರಟಿದ್ದೀರಿ. ಇವತ್ತು ಪವನ್ ನೆಜ್ಜೂರ್ ಅವರಿಗೆ ನ್ಯಾಯ ಬೇಕಾಗಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಇತರ ಅಧಿಕಾರಿಗಳ ನೈತಿಕ ಬಲ ಕುಗ್ಗುತ್ತಿದೆ. ಬೆಂಗಳೂರಿನಲ್ಲಿ ಮನೆ ಪಡೆಯಲು ಜನರು 11 ತಿಂಗಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಅದೇ ರೀತಿ ನಿಮ್ಮ ಅಧಿಕಾರಿಗಳ ಬಿಡ್ಡಿಂಗ್. 11 ತಿಂಗಳಲ್ಲಿ ಬದಲಾಯಿಸುತ್ತಾರೆ. ಹೊಸಬ ಹೆಚ್ಚು ದುಡ್ಡು ಕೊಟ್ಟರೆ ಆ ಜಾಗಕ್ಕೆ ಬರುತ್ತಾರೆ. ಇಲ್ಲವೇ ಅಲ್ಲಿದ್ದವರು ಅದಕ್ಕಿಂತ ಹೆಚ್ಚು ದುಡ್ಡು ಕೊಡಬೇಕಾಗಿದೆ ಎಂದು ದೂರಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಅಧಿಕಾರಿಗಳು ಬಲಿಯಾಗುತ್ತಾರೆ ಎಂದು ಅವರು ವಿವರಿಸಿದರು.


