ಬಿಗ್‌ಬಾಸ್ (Bigg Boss Kannada) ಕನ್ನಡ 10ನೇ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ (Karthik) ಅವರು ವಿನ್ನರ್ (Winner) ಆಗಿ ಹೊರಹೊಮ್ಮಿದ್ದಾರೆ. ಮೊದಲಿನಿಂದಲೂ ಆತ್ಮವಿಶ್ವಾಸದಿಂದಲೇ ಇದ್ದ ಕಾರ್ತಿಕ್ ಅವರು ಕೊನೆಯ ಕ್ಷಣದಲ್ಲಿ ಟೆನ್ಷನ್‌ಗೆ ಒಳಗಾದಂತೆ ಕಾಣಿಸುತ್ತಿದ್ದರು. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
Advertisement
ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್. ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್ ಕೈ ಇತ್ತು. ಆ ಟೆನ್ಷನ್ ಅನ್ನು ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು. ಇಬ್ಬರ ಕೈಯಲ್ಲಿ ಕಿಚ್ಚ ಕಾರ್ತಿಕ್ ಅವರ ಕೈ ಎತ್ತಿ ಹಿಡಿದರು. ಅದು ಕಾರ್ತಿಕ್ ಬದುಕಿನಲ್ಲಿಯಷ್ಟೇ ಅಲ್ಲ, ಅವರ ಅಭಿಮಾನಿಗಳೆಲ್ಲರ ಮನಸಲ್ಲಿಯೂ ಅತ್ಯಂಗ ಮಹತ್ವದ ಅಮೂಲ್ಯವಾದ ಗಳಿಗೆ. ಅತ್ಯಂತ ಯಶಸ್ಸು ಕಂಡ ಹತ್ತನೇ ಐತಿಹಾಸಿಕ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ಅವರು ಗೆಲುವನ್ನು ಸಾಧಿಸಿದ್ದಾರೆ. ಐವತ್ತು ಲಕ್ಷ ರೂಪಾಯಿಗಳು, ಜೊತೆಗೆ ಒಂದು ಮಾರುತಿ ಬ್ರೀಜಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಬಿಗ್‌ಬಾಸ್ ಮನೆಯಲ್ಲಿನ ಜರ್ನಿಯನ್ನು ಕಟ್ಟುಕೊಡುವ ಪ್ರಯತ್ನ ಇಲ್ಲಿದೆ.
Advertisement
Advertisement
ಕಟ್ಟುಮಸ್ತು ಮೈಕಟ್ಟು, ಪುಟ್ಟ ಮಗುವಿನಂಥ ಮನಸ್ಸು, ಮಗುವಿನ ಹಟ, ಜಿದ್ದು, ಕಿರುಚಾಟ, ಯಾರನ್ನಾದರೂ ಥಟ್ಟನೆ ಹಚ್ಚಿಕೊಳ್ಳುವ, ಹಚ್ಚಿಕೊಂಡವರಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುವ ಅಪ್ಪಟ ಭಾವುಕತೆ… ಇದು ಬಿಗ್‌ಬಾಸ್ 10ನೇ ಸೀಸನ್‌ನ ಟಾಪ್ 6 ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಕಾರ್ತಿಕ್ ಮಹೇಶ್ ಅವರ ವ್ಯಕ್ತಿತ್ವದ ತುಣುಕುಚಿತ್ರಗಳು. ಹತ್ತಾರು ಧಾರವಾಹಿ, ನಾಯಕನಾಗಿ ನಟಿಸಿದ್ದ ‘ಡೊಳ್ಳು’ ಎಂಬ ಸಿನಿಮಾಗೆ ಸಿಕ್ಕ ರಾಷ್ಟ್ರಪ್ರಶಸ್ತಿಯ ಮಾನ್ಯತೆ ಜೊತೆಗಿಟ್ಟುಕೊಂಡು ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ವೇದಿಕೆ ಏರಿದ್ದ ಕಾರ್ತಿಕ್ ಮನಸ್ಸಲ್ಲಿ, ‘ಮುಂದೇನು?’ ಎಂಬ ಪ್ರಶ್ನೆ ಎದ್ದುನಿಂತಿತ್ತು. ಪ್ರೇಕ್ಷಕರ ವೋಟಿಂಗ್‌ನಲ್ಲಿನಲ್ಲಿ ಪಾಸ್ ಆಗದೆ ‘ಹೋಲ್ಡ್’ ಸೀಟ್‌ನಲ್ಲಿ ಕೂತಾಗಲೂ ಅವರ ಮನಸ್ಸಲ್ಲಿ ಇದ್ದಿದ್ದು ಒಂದೇ ಪ್ರಶ್ನೆ, ‘ಮುಂದೇನು?’. ನಂತರ ‘ಅಸಮರ್ಥ’ರ ಪಟ್ಟ ಹೊತ್ತು ಮನೆಯೊಳಗೆ ಹೊಕ್ಕ ಕ್ಷಣದಿಂದ ಪ್ರತಿದಿನವೂ ಅವರು ‘ಮುಂದೇನು ಎಂಬ ಪ್ರಶ್ನೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ಆ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ತಮ್ಮ ಜಿದ್ದಿನ ಆಟ, ಸ್ನೇಹದ ನಡತೆ, ಆಟ ಎಂದು ಬಂದರೆ ಸ್ನೇಹಿತರನ್ನೂ ಎದುರುಹಾಕಿಕೊಳ್ಳುವ ನಿಷ್ಪಕ್ಷಪಾತಗುಣದಿಂದ ಅವರು ಗಮನಸೆಳೆದಿದ್ದಾರೆ. ಒಂದು ಹಂತದಲ್ಲಿಯಂತೂ ಬಿಗ್‌ಬಾಸ್ ಮನೆ ಎಂದರೆ ವಿನಯ್ ವರ್ಸಸ್ ಕಾರ್ತಿಕ್ ಎಂಬ ಮಟ್ಟಿಗೆ ಹೋಗಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಏರಿಳಿತ, ಮನರಂಜನೆ, ನೋವು, ದುಃಖ ಎಲ್ಲ ಭಾವಗಳೂ ತುಂಬಿರುವ ಕಾರ್ತಿಕ್ ಮಹೇಶ್ ಅವರ ಬಿಗ್‌ಬಾಸ್ ಜರ್ನಿಯ ಕೆಲವು ಚಿತ್ರಗಳು ಇಲ್ಲಿವೆ.
Advertisement
ಬಿಗ್‌ಬಾಸ್ ಜರ್ನಿಯುದ್ದಕ್ಕೂ ಕಾರ್ತಿಕ್ ಮಹೇಶ್ ಅವರಲ್ಲಿ ಎದ್ದು ಕಾಣಿಸಿದ್ದು ನಾಯಕತ್ವದ ಗುಣ ಅವರು ಈ ಸೀಸನ್‌ನಲ್ಲಿ ಎರಡು ಬಾರಿ ಮನೆಯ ಕ್ಯಾಪ್ಟನ್ ಆಗಿದ್ದರು. ಕ್ಯಾಪ್ಟನ್ ಆಗಿದ್ದಾಗಲಷ್ಟೇ ಅಲ್ಲ, ಗೇಮ್ ಆಡುವಾಗ, ಮನೆಯ ಉಳಿದ ಚಟುವಟಿಕೆಗಳಲ್ಲಿ ಎಲ್ಲವೂ ಅವರಲ್ಲಿನ ಮುಂದಾಳು ಎದ್ದು ಕಾಣಿಸುತ್ತಿದ್ದ. ಹಾಗೆಂದು ಅವರೇನೂ ಶಿಸ್ತಿನ ಸಿಪಾಯಿ ಆಗಿರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಮಾತನ್ನೂ ಕೇಳಿಸಿಕೊಂಡು ಎಲ್ಲರನ್ನೂ ಖುಷಿಖುಷಿಯಾಗಿಟ್ಟ ಕ್ಯಾಪ್ಟನ್ ಅವರು.
ನಾಲ್ಕನೇ ವಾರದಲ್ಲಿ ‘ಉಗ್ರಂ’ ತಂಡದ ಮುಂದಾಳಾಗಿ ತನಿಷಾ ನೇತೃತ್ವದ ‘ಭಜರಂಗಿ’ ತಂಡವನ್ನು ಹಿಂದಿಕ್ಕಿ ಗೆಲುವಿನ ದಡ ಮುಟ್ಟಿಸಿದ್ದು ಇದೇ ಕಾರ್ತಿಕ್. ಏಳನೇ ವಾರದಲ್ಲಿ ಪ್ರತಾಪ್, ನಮೃತಾ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರಿಂದ ಸಾಕಷ್ಟು ಸ್ಪರ್ಧೆಯನ್ನು ಎದುರಿಸಿಯೂ ಅವರು ನಾಯಕನ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ಎಂಟನೇ ವಾರವೂ ಅವರು ನಾಯಕನಾಗಿ ಆಯ್ಕೆಯಾಗುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.
ಮನೆಯೊಳಗಿನ ಕೆಲಸಗಳು, ಟಾಸ್ಕ್‌ಗಳನ್ನು ಹೊರತುಪಡಿಸಿ ಜಿಯೊ ಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳಲ್ಲಿಯೂ ಕಾರ್ತಿಕ್ ಅವರ ಕಾಂಪಿಟೇಷನ್ ಗಮನಾರ್ಹವಾದದ್ದು. ‘ಚಂಡ ಮಾರುತ’ ಟಾಸ್ಕ್‌ನಲ್ಲಿ ಸಂಗೀತಾ ಜೊತೆಗೂಡಿ ಅವರು ಆಡಿದ ಆಟಕ್ಕೆ ಗೆಲುವಿನ ಪ್ರತಿಫಲ ದೊರೆತಿತ್ತು. ‘ಬ್ರೇಕ್ ದ ಬಲೂನ್’ ಟಾಸ್ಕ್‌ನಲ್ಲಿಯೂ ಈ ಜೋಡಿ ಮೋಡಿ ಮಾಡಿ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರ ವಿರುದ್ಧ ಎರಡನೇ ಹಂತದಲ್ಲಿ ಗೆಲುವು ಸಾಧಿಸಿತ್ತು.