ನಿಮಗೆ ಸ್ಟ್ರಾಬೆರಿ ಅಂದರೆ ಇಷ್ಟವೇ? ನೀವು ಅಂಗಡಿಯಿಂದ ಜಾಮ್ ತಂದು ಬಳಸುತ್ತೀರಾದರೆ ಒಮ್ಮೆ ನೀವೇ ಮನೆಯಲ್ಲಿ ಜಾಮ್ ಮಾಡುವುದನ್ನು ಏಕೆ ಟ್ರೈ ಮಾಡಬಾರದು? ಸ್ಟ್ರಾಬೆರಿ ಹಾಗೂ ಕೇವಲ ಇನ್ನೆರಡು ಸಾಮಗ್ರಿಗಳನ್ನು ಬಳಸಿ ಸಿಂಪಲ್ ಆಗಿ ನೀವೇ ಜಾಮ್ ತಯಾರಿಸಬಹುದು. ಇದರ ರುಚಿ ಯಾವುದೇ ಬ್ರಾಂಡ್‌ನ ಜಾಮ್‌ಗೂ ಕಮ್ಮಿ ಎನಿಸುವುದಿಲ್ಲ. ಜಾಮ್ ಮಾಡೋದು ಇಷ್ಟೊಂದು ಸರಳ ಎಂದು ನೀವು ಆಶ್ಚರ್ಯ ಪಡುತ್ತೀರಿ. ನೀವೂ ಒಮ್ಮೆ ಮನೆಯಲ್ಲಿ ಸ್ಟ್ರಾಬೆರಿ ಜಾಮ್ (Strawberry Jam) ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಸ್ಟ್ರಾಬೆರಿ ಹಣ್ಣುಗಳು – 30
ಸಕ್ಕರೆ – 1 ಕಪ್
ಸಿಟ್ರಿಕ್ ಆಸಿಡ್ – ಕಾಲು ಟೀಸ್ಪೂನ್ (ಸಿಟ್ರಿಕ್ ಆಸಿಡ್ ಬದಲು ಅರ್ಧ ನಿಂಬೆ ಹಣ್ಣನ್ನೂ ಬಳಸಬಹುದು) ಇದನ್ನೂ ಓದಿ: ಚಿಕನ್‌ನಂತೆಯೇ ರುಚಿ – ಸೋಯಾಬೀನ್ ನಗ್ಗೆಟ್ಸ್ ಮಾಡಿ
Advertisement
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ನೀವು ಒಂದು ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ ಅಥವಾ ಒಂದು ಚಮಚವನ್ನು ಫ್ರೀಜರ್‌ನಲ್ಲಿಡಿ. (ಇದು ಬಳಿಕ ಜಾಮ್‌ನ ಸ್ಥಿರತೆ ಪರೀಕ್ಷಿಸಲು ಉಪಯೋಗಕ್ಕೆ ಬರುತ್ತದೆ)
* ಸ್ಟ್ರಾಬೆರಿ ಹಣ್ಣುಗಳನ್ನು ತೊಳೆದು, ತೇವಾಂಶವನ್ನು ತೆಗೆಯಲು ಒಣಗಿಸಿ.
* ಸ್ಟ್ರಾಬೆರಿಗಳನ್ನು ತೆಳುವಾಗಿ ಕತ್ತರಿಸಿಕೊಳ್ಳಿ.
* ಒಂದು ಪ್ಯಾನ್ ಅನ್ನು ಬಿಸಿ ಮಾಡಿ, ಅದರಲ್ಲಿ ಸ್ಟ್ರಾಬೆರಿ ಹಾಗೂ ಸಕ್ಕರೆ ಹಾಕಿ ಮಿಶ್ರಣ ಮಾಡಿ.
* ಉರಿಯನ್ನು ಮಧ್ಯಮದಲ್ಲಿಡಿ. ಸಕ್ಕರೆ ನಿಧಾನವಾಗಿ ಕರಗಲು ಪ್ರಾರಂಭವಾಗುತ್ತದೆ.
* ಸಕ್ಕರೆ ಕರಗಿದ ಬಳಿಕ ಸಿಟ್ರಿಕ್ ಆಸಿಡ್ ಅಥವಾ ನಿಂಬೆ ಹಣ್ಣಿನ ರಸವನ್ನು ಸೇರಿಸಿ.
* 3-4 ನಿಮಿಷಗಳ ಕಾಲ ಸ್ಟ್ರಾಬೆರಿಯನ್ನು ಬೇಯಿಸಿ. ಸ್ಟ್ರಾಬೆರಿ ನಿಧಾನವಾಗಿ ರಸ ಬಿಡಲು ಪ್ರಾರಂಭಿಸುತ್ತದೆ.
* ಈಗ ನೀವು ಸ್ಟ್ರಾಬೆರಿಯನ್ನು ಮೃದುವಾಗಿಸಲು ಮ್ಯಾಶ್ ಮಾಡಿ. (ಪಾವ್‌ಭಾಜಿ ಮಾಡುವ ಮ್ಯಾಶರ್ ಬಳಸಬಹುದು)
* ಸ್ಟ್ರಾಬೆರಿ ಚೆನ್ನಾಗಿ ಮ್ಯಾಶ್ ಆದ ಬಳಿಕ 7-8 ನಿಮಿಷಗಳ ಕಾಲ ಕುದಿಸುವುದನ್ನು ಮುಂದುವರಿಸಿ. ಜಾಮ್ ನಿಧಾನವಾಗಿ ದಪ್ಪವಾಗುವುದನ್ನು ನೀವು ಕಾಣಬಹುದು.
* ಜಾಮ್‌ನ ಸ್ಥಿರತೆಯನ್ನು ನೋಡಿಕೊಂಡು ಉರಿಯನ್ನು ಕಡಿಮೆ ಮಾಡಿಕೊಳ್ಳಿ. ನೀವು ಅದನ್ನು ಹೆಚ್ಚು ಬೇಯಿಸದಂತೆಯೂ ಎಚ್ಚರವಹಿಸಿ.
* ಈಗ ಸ್ಥಿರತೆ ಪರೀಕ್ಷಿಸಲು ಮೊದಲೇ ಫ್ರಿಜ್‌ನಲ್ಲಿಟ್ಟಿದ್ದ ಚಮಚವನ್ನು ತನ್ನಿ. ಅದನ್ನು ಜಾಮ್‌ಗೆ ಅದ್ದಿ, ಹೊರ ತೆಗೆಯಿರಿ. ಮಿಶ್ರಣ ಕೆಳಗೆ ಬಿದ್ದಿಲ್ಲವೆಂದಾದರೆ ಜಾಮ್ ತಯಾರಾಗಿದೆ ಎಂದರ್ಥ.
* ನೀವು ತಣ್ಣಗಿನ ತಟ್ಟೆಯ ಮೂಲಕ ಸ್ಥಿರತೆ ಪರೀಕ್ಷಿಸುತ್ತೀರಿ ಎಂದಾದರೆ, ಫ್ರಿಡ್ಜ್‌ನಿಂದ ತಟ್ಟೆಯನ್ನು ತೆಗೆದು, ಅದರ ಮೇಲೆ ಸ್ವಲ್ಪ ಜಾಮ್ ಹಾಕಿ ಬಳಿಕ ತಟ್ಟೆಯನ್ನು ಬಗ್ಗಿಸಿ ನೋಡಿ. ಜಾಮ್ ತೊಟ್ಟಿಕ್ಕದಂತೆ ದಪ್ಪವಾಗಿದ್ದರೆ, ಅದು ತಯಾರಾಗಿದೆ ಎಂದರ್ಥ.
* ಈಗ ಉರಿಯನ್ನು ಆಫ್ ಮಾಡಿ, ಜಾಮ್ ಅನ್ನು ತಣ್ಣಗಾಗಲು ಬಿಡಿ.
* ಜಾಮ್ ತಣ್ಣಗಾದ ಬಳಿಕ ಅದನ್ನು ಗಾಳಿಯಾಡದ ಗಾಜಿನ ಡಬ್ಬಿಯಲ್ಲಿ ಹಾಕಿಡಿ.
* ನೀವು ಬೇಕೆನಿಸಿದಾಗ ಬನ್, ಬ್ರೆಡ್, ಚಪಾತಿಯೊಂದಿಗೆ ಮನೆಯಲ್ಲೇ ತಯಾರಿಸಿದ ಜಾಮ್ ಅನ್ನು ಸವಿಯಬಹುದು. ಇದನ್ನೂ ಓದಿ: ನೀವೊಮ್ಮೆ ಮಾಡಿ ಅಕ್ಕಿ ಹಲ್ವಾ