ಮಾವಿನ ಸೀಸನ್ ಆರಂಭಗೊಂಡಿದ್ದು, ಹಣ್ಣುಗಳ ರಾಜ ಮಾವು ಮಾರುಕಟ್ಟೆಯಲ್ಲಿ ತನ್ನದೇ ರಾಜ್ಯಭಾರ ಆರಂಭಿಸಿದೆ. ಈಗ ಮಾವಿನ ಹಲವು ಬಗೆಯ ಖಾದ್ಯಗಳನ್ನು ಮಾಡಿ ಸವಿಯಲು ಸರಿಯಾದ ಸಮಯ!
ಇಂದು ವಿಶೇಷವಾಗಿ ಮಾವಿನ ಹಣ್ಣಿನಿಂದ ಮಾಡುವ ಗುಳಂಬದ ಬಗ್ಗೆ ತಿಳಿದುಕೊಳ್ಳೋಣ. ಗುಳಂಬ ಎಂಬುದು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಮಾಡುವ ವಿಭಿನ್ನ ಖಾದ್ಯ. ಬಹಳ ರುಚಿ ನೀಡುವಂತಹ ಸಿಹಿ ತಿಂಡಿ ಇದು. ಹಲ್ವಾದಂತೆ ಕಾಣಿಸುವ ಈ ಖಾದ್ಯ ಸವಿಯಲು ಬಹಳ ರುಚಿಯಾಗಿರುತ್ತದೆ.
ಮಾವಿನ ಹಣ್ಣಿನ ಈ ಗುಳಂಬಕ್ಕೆ ಏನೆಲ್ಲ ಬೇಕು?
ಮಾವಿನಕಾಯಿ – 2
*ಸಕ್ಕರೆ
*ಅಜ್ವೈನ
*ಅರಿಶಿನ ಪುಡಿ
*ಖಾರದ ಪುಡಿ
*ರೆಡ್ ಸಾಲ್ಟ್
*ಜೀರಿಗೆ
*ಮೆಂತ್ಯ
ಗುಳಂಬ ಮಾಡೋದು ಹೇಗೆ?
ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಅದನ್ನು ಕ್ಯಾರೆಟ್ ತುರಿಯಿಂದ ಚೆನ್ನಾಗಿ ತುರಿದು ಒಂದು ಬೌಲ್‌ಗೆ ಹಾಕಿಡಬೇಕು. ಬಳಿಕ ಅದರಲ್ಲೆ ಅರ್ಧ ಬೌಲ್ ಸಕ್ಕರೆ ಸಹ ತೆಗೆದುಕೊಂಡು ಮಾವಿನಕಾಯಿಯ ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಸ್ಟೌವ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕಾಲು ಚಮಚ ಮೆಂತ್ಯೆ, ಒಂದು ಚಮಚ ಜೀರಿಗೆ, ಅಜ್ವೈನ ಹಾಕಿ ಡ್ರೈ ಆಗಿ ಫ್ರೈ ಮಾಡಬೇಕು. ನಂತರ ಈ ಪದಾರ್ಥವನ್ನು ತೆಗೆದು ತಣ್ಣಗಾದ ಬಳಿಕ ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿ, ಒಂದು ಬೌಲ್‌ನಲ್ಲಿ ಇಡಬೇಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಮೊದಲು ಮಿಕ್ಸ್ ಮಾಡಿಕೊಂಡಿದ್ದ ಮಾವಿನಕಾಯಿ ಹಾಗೂ ಸಕ್ಕರೆ ಪ್ರಮಾಣವನ್ನು ಈ ಬಾಣಲೆಗೆ ಹಾಕಿಕೊಳ್ಳಬೇಕು. ಹಾಗೆ ಇದಕ್ಕೆ ಕಾಲು ಚಮಚ ಅರಶಿಣ, ಖಾರದ ಪುಡಿ, ಹಾಗೆ ಪಿಂಕ್ ಸಾಲ್ಟ್ ಅಥವಾ ರೆಡ್ ಸಾಲ್ಟ್ ಹಾಕಿಕೊಳ್ಳಿ. ಈಗ ಮಿಕ್ಸಿಯಲ್ಲಿ ಪುಡಿ ಮಾಡಿದ್ದ ಮಸಾಲೆಗಳನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿ, 3 ನಿಮಿಷ ಬಿಡಬೇಕು. ಅದು ಹಲ್ವಾ ರೀತಿಯಲ್ಲಿ ಅಂಟು ಅಂಟಾಗಿ, ಸುಮಾರು 5 ನಿಮಿಷದಲ್ಲಿ ತಯಾರಾಗುತ್ತದೆ. ಬೆಳಗ್ಗಿನ ತಿಂಡಿಯೊಂದಿಗೆ ಸವಿಯಲು ಇದು ಉತ್ತಮ.