ಶ್ರಾವಣ ಮಾಸದ ಪೂರ್ಣಿಮೆ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ವ್ರತ. ಒಂದೊಮ್ಮೆ ಶರಕ್ರವಾರ ಹುಣ್ಣಿಮೆ ಬಂದರೆ ಅಂದೇ ವರಮಹಾಲಕ್ಷ್ಮೀ ವ್ರತ. ಈ ಶುಕ್ರವಾರಕ್ಕೆ ‘ಸಂಪತ್ ಶುಕ್ರವಾರ’ ಎಂಬ ಹೆಸರಿದೆ. ‘ಲಕ್ಷ್ಮೀ’ ಎಂಬ ಶಬ್ದಕ್ಕೆ ಎಲ್ಲವನ್ನೂ ಯಾವಗಲೂ ನೋಡುತ್ತಿರುವವಳು ಎಂದರ್ಥ. ಲಕ್ಷ್ಮಿ ಅನುಗ್ರಹವಾದರೆ ಮನೆಯಲ್ಲಿ ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿ, ಕೀರ್ತಿಲಕ್ಷ್ಮಿ, ಮೋಕ್ಷ ಲಕ್ಷ್ಮಿ ಎಲ್ಲವೂ ನೆಲೆಸುತ್ತವೆ. ಆದ್ದರಿಂದ ಸಿರಿ ಸೌಭಾಗ್ಯ ಸಂಪದಭಿವೃದ್ಧಿಗಾಗಿ ಸುಮಂಗಲಿಯರು, ಪುರುಷರು ಈ ವ್ರತವನ್ನು ಆಚರಿಸುತ್ತಾರೆ.
ವ್ರತ ಮಾಡುವುದು ಹೇಗೆ?
ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವವರು ಹನ್ನೆರಡು ತಂತುಗಳಿಂದ ಮಾಡಿದ ಹನ್ನೆರಡು ಗಂಟುಗಳಿಂದ ಕೂಡಿದ, ಲಕ್ಷ್ಮೀದಾರವನ್ನು ಬಲಹಸ್ತಕ್ಕೆ ಕಟ್ಟಿಕೊಂಡು, ಶ್ರದ್ಧಾಭಕ್ತಿಗಳಿಂದ ಪೂಜಿಸಬೇಕು. ಹನ್ನೆರಡು ಎಂಬುದು ವಾಸುದೇವನಿಗೆ ಪ್ರಿಯವಾದ ಒಂದು ಶಕ್ತಿಪೂರ್ಣವಾದ ರಹಸ್ಯ ಸಂಖ್ಯೆ. ದ್ವಾದಶಾತ್ಮಕನಾದ ಭಗವಂತನ ಪರಾಶಕ್ತಿಯಾಗಿ ಆತನೊಡನೆ ಸದಾ ಸರ್ವತ್ರಯೋಗವನ್ನು ಹೊಂದಿರುವ ಶ್ರೀ ವರಮಹಾಲಕ್ಷ್ಮಿ ದೇವಿಯೂ ದ್ವಾದಶಾತ್ಮಕಳಾಗಿ(12) ದ್ವಾದಶ ತಂತುಗ್ರಂಥಿಗಳಲ್ಲಿ ದ್ವಾದಶನಾಮಾವಲೀ ಪೂಜೆಯನ್ನು ಸ್ವೀಕರಿಸುತ್ತಾಳೆ.
ಅಭ್ಯಂಜನ ಸ್ನಾನಮಾಡಿ, ಶುಭ್ರ ವಸ್ತ್ರವನ್ನು ಧರಿಸಿ, ಆಪ್ಪಿಕಗಳನ್ನು ಪೂರೈಸಿ, ಸಾರಿಸಿ ರಂಗವಲ್ಲಿಯಿಟ್ಟ ದಿವ್ಯ ಮಂಟಪದಲ್ಲಿ, ಪಂಚವರ್ಣಗಳಿಂದ ಕೂಡಿದ, ಅಷ್ಟದಳ ಪದ್ಮವನ್ನು ರಚಿಸಿ, ಕಲಶವನ್ನಿಟ್ಟು ಅದರಲ್ಲಿ ವರಮಹಾಲಕ್ಷ್ಮೀಯನ್ನು ಆವಾಹಿಸಿ, ಪ್ರಾಣಪ್ರತಿಷ್ಠೆ, ಶ್ರೀಸೂಕ್ತ ವಿಧಾನದಿಂದ ಕಲ್ಲೋಕ್ತ ಷೋಡಶೋಪಚಾರ ಪೂಜೆ ಸಲ್ಲಿಸಿ, ನಾನಾ ವಿಧವಾದ ಭಕ್ಷ ಭೋಜ್ಯಗಳನ್ನು ತಾಯಿಗೆ ಅರ್ಪಿಸಿ ಪ್ರಾರ್ಥಿಸಬೇಕು.
ಭವಿಷ್ಯತ್ತರ ಪುರಾಣದಲ್ಲಿ ಲೋಕಾನುಗ್ರಹಕ್ಕಾಗಿ ಈಶ್ವರನು ಪಾರ್ವತಿಗೆ ವಿವರಿಸಿದ ವ್ರತವೇ ವರಮಹಾಲಕ್ಷ್ಮೀ ವ್ರತ. ಸಂಸ್ಕೃತ ವೈದಿಕ ಸಾಹಿತ್ಯದಲ್ಲಿ ಲಕ್ಷ್ಮಿಯನ್ನು ಸೌಂದರ್ಯ, ಸಂಪತ್ತು, ವಿಜಯ್, ಯಶಸ್ಸು ಮುಂತಾದ ಎಲ್ಲಾ ಸದ್ಗುಣ ಹಾಗೂ ಲೌಕಿಕ ಭಾಗ್ಯಗಳ ಅಧಿದೇವತೆಯೆಂದು ಸ್ತುತಿಸಲಾಗಿದೆ. ಪದ್ಮಪುರಾಣದಲ್ಲಿ ಲಕ್ಷ್ಮೀ ವಿಷ್ಣುವಿನ ಶಕ್ತಿಯಾಗಿ ಅವನಲ್ಲಿರುವ ಶ್ರೀ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ತುಷ್ಟಿಪುಷ್ಠಿಗಳ ಪ್ರತೀಕವಾಗಿದ್ದಾಳೆ ಎಂದು ಹೇಳಿದೆ.
ಹೀಗೆ ಲಕ್ಷ್ಮೀ ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಪ್ರಧಾನ ದೇವತೆಯಾಗಿ, ಎಲ್ಲ ಆಸ್ತಿಕರ ಮನ ಮನೆಗಳಲ್ಲಿ ನೆಲೆಸಿದ್ದಾಳೆ. ಅಂತಹ ಲಕ್ಷ್ಮೀಯನ್ನು ಆರಾಧಿಸಿ, ಮನೆಯಲ್ಲಿ ಧನ, ಕನಕ ಐಶ್ವರ್ಯಾದಿಗಳು ಸದಾ ನೆಲೆಸುವಂತೆ ಬೇಡಿಕೊಳ್ಳುವುದೇ ವರಮಹಾಲಕ್ಷ್ಮೀ ವ್ರತದ ಅಂತರಂಗವೆನ್ನಬಹುದು.
ವರಲಕ್ಷ್ಮಿ ಮಂತ್ರ
‘ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ|
ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ||