– ಸಮುದ್ರ ಜೀವರಾಶಿಗಳಿಗೆ ಅಪಾಯ – ಕರಾವಳಿ ಆರ್ಥಿಕತೆಗೆ ಪೆಟ್ಟು
– ಕೇರಳ ಕರಾವಳಿಯಲ್ಲಿ ಅಪಾಯಕಾರಿ ರಾಸಾಯನಿಕ ಸಾಗಿಸುತ್ತಿದ್ದ ಕಂಟೇನರ್ ಹಡಗು ಮುಳುಗಡೆ
ಕೇರಳದಲ್ಲಿ ತೈಲ ತುಂಬಿದ ಕಂಟೇನರ್‌ಗಳನ್ನು ಹೊತ್ತ ಲೈಬೀರಿಯಾದ ಸರಕು ಸಾಗಣೆ ಹಡಗು MSC Elsa 3 ಸಂಪೂರ್ಣ ಮುಳುಗಡೆಯಾಗಿದೆ. ಕೇರಳದ ಅಲಪ್ಪುಳದಲ್ಲಿರುವ ತೊಟ್ಟಪ್ಪಲ್ಲಿ ಬಂದರಿನಿಂದ 14.6 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಿತ್ತು. ಇದರಿಂದ ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಅಪಾಯಕಾರಿ ರಾಸಾಯನಿಕಗಳು, ಡೀಸೆಲ್ ಮತ್ತು ಮರೀನ್ ಗ್ಯಾಸ್ ಆಯಿಲ್ (ಹಡಗುಗಳಿಗೆ ಬಳಸುವ ಇಂಧನ) ಸಮುದ್ರ ಪಾಲಾಗಿದೆ.
ಹಡಗಿನಲ್ಲಿ 13 ಬಗೆಯ ಅಪಾಯಕಾರಿ ರಾಸಾಯನಿಕ ತುಂಬಿದ 643 ಕಂಟೈನರ್‌ಗಳಿದ್ದವು. ಈ ಪೈಕಿ 73 ಕಂಟೈನರ್‌ಗಳು ಖಾಲಿಯಿದ್ದವು. ಇದರಲ್ಲಿ ಒಟ್ಟು 5 ಕಂಟೇನರ್‌ಗಳು ಇಂದು ಪತ್ತೆಯಾಗಿವೆ. ಮೊದಲಿಗೆ ಹಡಗಿನ ಒಂದು ಭಾಗವು ವಾಲಿಕೊಂಡಿದ್ದರಿಂದ 10 ಕಂಟೈನರ್‌ಗಳು ಮಾತ್ರ ಸಮುದ್ರದಲ್ಲಿ ಮುಳುಗಿದ್ದವು, ಬಳಿಕ ರಕ್ಕಸ ಅಲೆಗಳ ಹೊಡೆತಕ್ಕೆ ಸಿಕ್ಕಿ ಹಡಗೇ ಮುಳುಗಡೆಯಾಯಿತು. ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ರಕ್ಷಿಸಿದೆ. ಆದ್ರೆ ತೈಲ ಕಂಟೇನರ್‌ಗಳಿಂದ ಪರಿಸರಕ್ಕೆ ಹಾನಿಯಾಗುವ ಆತಂಕವಿದೆ. ಹೀಗಾಗಿ ದಡಗಳಿಗೆ ತೇಲಿ ಬಂದರೆ ಜನರು ಹತ್ತಿರ ಹೋಗದಂತೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರವು (KSDMA) ಎಚ್ಚರಿಕೆ ನೀಡಿದೆ. ಇದರಿಂದ ಪರಿಸರಕ್ಕೆ ಸಂಭವಿಸಬಹುದಾದ ಅಪಾಯಗಳ ಸಾಧ್ಯತೆ ಕುರಿತು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಹಡಗು ಮುಳುಗಿದ್ದು ಹೇಗೆ?
ಶನಿವಾರ ಮಧ್ಯಾಹ್ನದ ವೇಳೆಗೆ ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು (70.376 ಕಿಮೀ) ದೂರದ ಅರಬ್ಬಿ ಸಮುದ್ರದಲ್ಲಿ ಕಾರ್ಗೋ ಶಿಪ್ ಸುಮಾರು 26 ಡಿಗ್ರಿಗಳಷ್ಟು ಕೆಳಮಟ್ಟಕ್ಕೆ ಇಳಿದಿತ್ತು. ತಕ್ಷಣವೇ ಭಾರತೀಯ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಲಾಯಿತು. ಐಎನ್‌ಎಸ್ ಸುಜಾತಾ, ಐಸಿಜಿಎಸ್ ಅನ್ವೇಷ್ ಮತ್ತು ಐಸಿಜಿಎಸ್ ಸಕ್ಷಮ್ ಎಂಬ ಮೂರು ಹಡಗುಗಳನ್ನು ರಕ್ಷಣಾ ಕಾರ್ಯಕ್ಕಾಗಿ ಕಳುಹಿಸಲಾಯಿತು. ಅಷ್ಟರಲ್ಲಿ ಎಂಎಸ್‌ಸಿ ELSA 3 ಪ್ರವಾಹದ ಅಲೆ ವಿಪರೀತವಾಗಿ ಹಡಗು ಮಗುಚಿತ್ತು. ಹಡಗಿನಲ್ಲಿ 13 ಬಗೆಯ ಅಪಾಯಕಾರಿ ರಾಸಾಯನಿಕಗಳು ತುಂಬಿದ್ದವು. ಈ ಪೈಕಿ 12 ಕ್ಯಾಲ್ಸಿಯಂ ಕಾರ್ಬೈಡ್, ಹೆಚ್ಚುವರಿಯಾಗಿ 84.44 ಮೆಟ್ರಿಕ್ ಟನ್ ಡೀಸೆಲ್, 367.1 ಮೆಟ್ರಿಕ್ ಟನ್ ಫರ್ನೇಸ್ ಆಯಿಲ್ ಟ್ಯಾಂಕ್‌ಗಳು ಇದ್ದವು ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.
MSC ELSA 3 ಹಡಗು 1997 ರಲ್ಲಿ ನಿರ್ಮಿಸಲಾದ 184 ಮೀಟರ್ ಉದ್ದದ ಹಡಗಾಗಿತ್ತು. ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ (MSC) ಈ ಹಡಗನ್ನು ನಿರ್ವಹಣೆ ಮಾಡುತ್ತಿತ್ತು. ಇದರಲ್ಲಿ ಓರ್ವ ರಷ್ಯನ್ ಕ್ಯಾಪ್ಟನ್, 20 ಮಂದಿ ಫಿಲಿಫೈನ್ಸ್ ಪ್ರಜೆಗಳು, ಇಬ್ಬರು ಉಕ್ರೇನ್ ಮತ್ತು ಓರ್ವ ಜಾರ್ಜಿಯನ್ ಸಿಬ್ಬಂದಿ ಸೇರಿ 24 ಮಂದಿ ಇದ್ದರು.
@IndiaCoastGuard #MRCC, #Mumbai received a Distress Alert regarding Liberia-flagged container vessel MSC ELSA 3 developing 26° list approx 38 nautical miles southwest of #Kochi. Vessel departed #Vizhinjam Port on 23 May 25, bound for #Kochi with ETA 24 May 25. #ICG is actively… pic.twitter.com/U7SzOBsE9h
— Indian Coast Guard (@IndiaCoastGuard) May 24, 2025
ತೈಲ ಸೋರಿಕೆ ಅಂದ್ರೆ ಏನು?
ಕಚ್ಚಾ ತೈಲ, ಡೀಸೆಲ್ ಅಥವಾ ಇಂಧನ ತೈಲದಂತಹ ಪೆಟ್ರೋಲಿಯಂ ಉತ್ಪನ್ನಗಳು ಪರಿಸರಕ್ಕೆ, ಸಾಮಾನ್ಯವಾಗಿ ಸಾಗರ, ನದಿಗಳು ಅಥವಾ ಕರಾವಳಿ ಪ್ರದೇಶಗಳಂತಹ ಜಲಮೂಲಗಳಿಗೆ ಆಕಸ್ಮಿಕವಾಗಿ ಅಥವಾ ಪ್ರಾಕೃತಿಕ ವಿಕೋಪಕ್ಕೆ ಸಿಕ್ಕಿ ಸೋರಿಕೆಯಾಗುವುದನ್ನು ತೈಲ ಸೋರಿಕೆ ಎನ್ನುತ್ತಾರೆ. ಹಡಗು ಅಪಘಾತಗಳು, ಕಡಲ ಕೊರೆತ, ಪೈಪ್‌ಲೈನ್ ಸೋರಿಕೆ ಅಥವಾ ಅಕ್ರಮ ಡಂಪಿಂಗ್‌ನಿಂದಾಗಿ ತೈಲ ಸೋರಿಕೆಗಳು ಹೆಚ್ಚಾಗಿ ಸಂಭವಿಸುತ್ತವೆ. ನೀರಿನಲ್ಲಿ ತೈಲಸೋರಿಕೆಯು ವೇಗವಾಗಿ ಹರಡುವುದರಿಂದ ಕಡಿಮೆ ಸಾಂದ್ರತೆಯಿಂದಾಗಿ ನೀರಿನ ಮೇಲೆ ಪದರವನ್ನು ಸೃಷ್ಟಿಸುತ್ತದೆ. ಇದರಿಂದ ಸೂರ್ಯನ ಬೆಳಕು ತಡೆದು ಸಮುದ್ರ ಸಸ್ಯಗಳಲ್ಲಿ ದ್ಯುತಿಶ್ಲೇಷಣೆ ಕ್ರಿಯೆಗೆ ಅಡ್ಡಿಯುಂಟುಮಾಡುತ್ತದೆ.
ತೈಲ ಸೋರಿಕೆಯಿಂದ ಪರಿಸರದ ಮೇಲಾಗುವ ಪರಿಣಾಮ ಏನು?
ತೈಲ ಸೋರಿಕೆಯು ಒಂದು ಕಡೆ ಸಮುದ್ರಲ್ಲಿನ ಸಸ್ಯಗಳ ದ್ಯುತಿಶ್ಲೇಷಣೆ ಕ್ರಿಯೆಗೆ ಅಡಿಯುಂಟುಮಾಡಿದ್ರೆ ಮತ್ತೊಂದು ಕಡೆ ಮೀನು, ಸಮುದ್ರ ಪಕ್ಷಿಗಳು ಮತ್ತು ಇತರ ಸಮುದ್ರ ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತದೆ.
ಪರಿಸರ ಹಾನಿ: ತೈಲವು ಸಮುದ್ರ ಜೀವಿಗಳ ಆಹಾರ ಮೂಲಗಳ ಮೇಲೆ ಪರಿಣಾಮ ಬೀರಬಹುದು. ಅವುಗಳಿಗೆ ಸಿಗುವ ಆಹಾರ ವಿಷಪೂರಿತವಾಗಬಹುದು. ಜಲಚರಗಳ ಉಸಿರಾಟಕ್ಕೂ ತೊಂದರೆಯಾಗಬಹುದು. ಒಂದು ವೇಳೆ ತೈಲ ಎತೆಚ್ಚವಾಗಿ ಸೋರಿಕೆಯಾದ್ರೆ, ಅಪಾಯದಿಂದ ಬದುಕುಳಿದ ಪ್ರಾಣಿಗಳು ಮುಂದಿನ ಕೆಲ ವಾರ, ತಿಂಗಳುಗಳಲ್ಲೇ ಸಾವನ್ನಪ್ಪುವ ಸಾಧ್ಯತೆಗಳಿವೆ. ಅಲ್ಲದೇ ಸಮುದ್ರ ಪ್ರಾಣಿಗಳು ಮತ್ತು ಜಲಚರಗಳ ಸಂತಾನೋತ್ಪತ್ತಿಗೂ ಅಡ್ಡಿಯುಂಟು ಮಾಡುತ್ತದೆ. ಜೊತೆಗೆ ನೀರಿನ ಗುಣಮಟ್ಟ ಮತ್ತು ಜಲಚರ ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತವೆ.
ಆರ್ಥಿಕ ಪರಿಣಾಮಗಳು, ಪ್ರವಾಸೋದ್ಯಮಕ್ಕೂ ಹೊಡೆತ: MSC ELSA 3 ಹಡಗು ಮುಳುಗಡೆಯಿಂದ ತೈಲ ಸೋರಿಕೆ ಆತಂಕ ಹೆಚ್ಚಾಗಿದ್ದು, ಮೀನುಗಾರಿಕೆಗೂ ನಿಷೇಧ ವಿಧಿಸಲಾಗಿದೆ. ಇದರಿಂದ ಮೀನುಗಾರಿಕೆಯನ್ನೇ ಅವಲಂಬಿಸಿರುವ ಕೇರಳದ ಮೀನುಗಾರಿಕಾ ಸಮುದಾಯಗಳಿಗೆ ಆರ್ಥಿಕ ಹೊರೆ ಉಂಟಾಗಿದೆ. ಮತ್ತೊಂದೆಡೆ, ಪ್ರವಾಸಿಗರಿಗೂ ನಿರ್ಬಂಧ ವಿಧಿಸಿರುವ ಹಿನ್ನೆಲೆ ಕರಾವಳಿ ಆರ್ಥಿಕತೆಗೂ ಹೊಡೆತ ಬಿದ್ದಂತಾಗಿದೆ.
ಶುಚಿಗೊಳಿಸಲು ದುಬಾರಿ ವೆಚ್ಚ: ಒಂದು ವೇಳೆ ಸಮುದ್ರದಲ್ಲಿ ತೈಲ ಸೋರಿಕೆ ಸಂಭವಿಸಿದ್ದರೆ, ಭಾರತೀಯ ಕರಾವಳಿ ಕಾವಲು ಪಡೆಗಳು ಪ್ರಸರಣಕಾರಕಗಳು ಮತ್ತು ಬೂಮ್‌ಗಳನ್ನು (ತೈಲವನ್ನು ಹೀರಿಕೊಳ್ಳುವ ವಸ್ತು) ಬಳಸಿಕೊಂಡು ಶುಚಿಗೊಳಿಸುತ್ತವೆ. ಆದರೆ ಇದಕ್ಕೆ ದುಬಾರಿ ವೆಚ್ಚ, ಸಮಯವೂ ಬೇಕಾಗುತ್ತದೆ.
ಆರೋಗ್ಯ ಸಮಸ್ಯೆ: ತೈಲ ಆವಿ ಅಥವಾ ಕಲುಷಿತ ಸಮುದ್ರಾಹಾರಕ್ಕೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗಳು, ಚರ್ಮದ ರೋಗ ಅಥವಾ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ತಜ್ಞರು.
ಇತಿಹಾಸದಲ್ಲೇ ಅತಿದೊಡ್ಡ ತೈಲ ಸೋರಿಕೆ ದುರಂತಗಳಾವುವು?
ಡೀಪ್ ವಾಟರ್ ಹರೈಸನ್ (ಗಲ್ಫ್ ಆಫ್ ಮೆಕ್ಸಿಕೋ, ಏಪ್ರಿಲ್ 20-ಜುಲೈ 15, 2010): ಡೀಪ್ ವಾಟರ್ ಹರೈಸನ್ ಆಫ್‌ಶೋರ್ ಡ್ರಿಲ್ಲಿಂಗ್ ರಿಗ್ (ತೈಲ ತೆಗೆಯುವ ಯಂತ್ರೋಪಕರಣ ಘಟಕ) ಸ್ಫೋಟಗೊಂಡ ನಂತರ ಸುಮಾರು 206 ಮಿಲಿಯನ್ ಗ್ಯಾಲನ್‌ಗಳು, ಅಂದರೆ 4.9 ಮಿಲಿಯನ್ ಬ್ಯಾರೆಲ್‌ನಷ್ಟು ತೈಲ ನೀರಿನಲ್ಲಿ ಸೋರಿಕೆಯಾಗಿತ್ತು. ಈ ಘಟನೆಯಲ್ಲಿ 11 ಕಾರ್ಮಿಕರು ಸಾವನ್ನಪ್ಪಿದರು. ಇದು ಗಲ್ಫ್ ಕರಾವಳಿ ಪರಿಸರ ವ್ಯವಸ್ಥೆಗಳನ್ನು ಸಾಕಷ್ಟು ಹಾನಿಗೊಳಿಸಿತ್ತು. ಡಾಲ್ಫಿನ್, ಆಮೆಯಂತಹ ಸಾವಿರಾರು ಸಮುದ್ರ ಪ್ರಾಣಿಗಳನ್ನ ಕೊಂದು ಮೀನುಗಾರಿಕೆಯನ್ನೂ ನಾಶಪಡಿಸಿತ್ತು. ಲೂಸಿಯಾನ, ಮಿಸ್ಸಿಸ್ಸಿಪ್ಪಿ ಮತ್ತು ಫ್ಲೋರಿಡಾದಲ್ಲಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿತ್ತು. ಸಮುದ್ರದಲ್ಲಿ ಇದರ ಶುದ್ಧೀಕರಣಕ್ಕೆ 65 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹಣ ವಿನಿಯೋಗಿಸಲಾಗಿತ್ತು.
ಗಲ್ಫ್ ಯುದ್ಧ ತೈಲ ಸೋರಿಕೆ (ಪರ್ಷಿಯನ್ ಕೊಲ್ಲಿ, ಜನವರಿ 19-28, 1991): 1991 ರಲ್ಲಿ ಪರ್ಷಿಯನ್ ಗಲ್ಫ್ ಯುದ್ಧದ ವೇಳೆ ಅಮೆರಿಕ ಮಿಲಿಟರಿ ಕಾರ್ಯಾಚರಣೆಗಳಿಗೆ ಅಡ್ಡಿಯಾಗಲು ಇರಾಕಿ ಪಡೆಗಳು ಕುವೈತ್‌ನ ಸೀ ಐಲ್ಯಾಂಡ್ ಟರ್ಮಿನಲ್ ಮತ್ತು ಟ್ಯಾಂಕರ್‌ಗಳಿಂದ ಗಲ್ಫ್ ಯುದ್ಧದ ಸಮಯದಲ್ಲಿ ಉದ್ದೇಶಪೂರ್ವಕವಾಗಿ ತೈಲವನ್ನು ಸಮುದ್ರಕ್ಕೆ ಸೋರಿಕೆ ಮಾಡಿದ್ದವು. ಸುಮಾರು 240-336 ಮಿಲಿಯನ್ ಗ್ಯಾಲನ್‌ಗಳು, ಅಂದರೆ, 6-8 ಮಿಲಿಯನ್ ಬ್ಯಾರೆಲ್ ತೈಲ ಸೋರಿಕೆಯಾಗಿತ್ತು. ಇದು ಇದುವರೆಗಿನ ಅತಿದೊಡ್ಡ ಉದ್ದೇಶಪೂರ್ವಕ ತೈಲ ಸೋರಿಕೆ ಘಟನೆಯಾಗಿದೆ.
ಇಕ್ಸ್ಟಾಕ್-i (ಗಲ್ಫ್ ಆಫ್ ಮೆಕ್ಸಿಕೋ, ಜೂನ್ 3, 1979–ಮಾರ್ಚ್ 23, 1980): 1973ರ ಜೂನ್ 3ರಂದು ಮೆಕ್ಸಿಕೋದ ಕ್ಯಾಂಪೇಚೆ ಕೊಲ್ಲಿ ಪ್ರದೇಶದಲ್ಲಿರುವ ಕಡಲಾಚೆಯ ಬಾವಿಯಲ್ಲಿ ಸಂಭವಿಸಿದ ತೈಲ ಸೋರಿಕೆ ದುರಂತವಾಗಿದೆ. ಒಟ್ಟು 140 ಮಿಲಿಯನ್ ಗ್ಯಾಲನ್‌ಗಳು ಅಂದ್ರೆ ಸುಮಾರು 3.3 ಮಿಲಿಯನ್ ಬ್ಯಾರೆಲ್‌ನಷ್ಟು ತೈಲ ಹಂತಹಂತವಾಗಿ 10 ತಿಂಗಳ ಕಾಲ ಸೋರಿಕೆಯಾಗಿತ್ತು. ಇದು ಇದುವೆರೆಗಿನ ದೀರ್ಘಶ್ರೇಣಿಯ ತೈಲ ಸೋರಿಕೆಯಾಗಿದೆ.
ಅಟ್ಲಾಂಟಿಕ್ ಎಂಪ್ರೆಸ್ (ಆಫ್ ಟೊಬಾಗೋ, ಜುಲೈ 19, 1979): ಗ್ರೀಕ್ ಟ್ಯಾಂಕರ್ ಅಟ್ಲಾಂಟಿಕ್ ಎಂಪ್ರೆಸ್ ಟ್ರಿನಿಡಾಡ್ ಮತ್ತು ಟೊಬಾಗೋ ಬಳಿ ಏಜಿಯನ್ ಕ್ಯಾಪ್ಟನ್ ಎಂಬ ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದು, ಅಂದಾಜು 88 ಮಿಲಿಯನ್ ಗ್ಯಾಲನ್‌ಗಳಷ್ಟು ಕಚ್ಚಾ ತೈಲ ಸೋರಿಕೆಯಾಗಿತ್ತು. ಎರಡೂ ಹಡಗುಗಳಿಗೆ ಬೆಂಕಿ ಹೊತ್ತಿಕೊಂಡು 27 ಸಿಬ್ಬಂದಿ ಸಜೀವದಹನವಾಗಿದ್ದರು. ಆದ್ರೆ ಹೆಚ್ಚಿನ ಪ್ರಮಾಣದ ತೈಲ ಬೆಂಕಿಗೆ ಆಹುತಿಯಾದ್ದರಿಂದ ಕರಾವಳಿ ಪ್ರದೇಶದ ಮೇಲೆ ಪರಿಣಾಮ ಬೀರದಿದ್ದರೂ, ಸಮುದ್ರ ಜೀವರಾಶಿಗಳ ಮೇಲೆ ಪರಿಣಾಮ ಬೀರಿತ್ತು.
ಅಮೋಕೊ ಕ್ಯಾಡಿಜ್ (ಬ್ರಿಟಾನಿ, ಫ್ರಾನ್ಸ್, ಮಾರ್ಚ್ 16, 1978): ಲೈಬೀರಿಯನ್-ನೋಂದಾಯಿತ ಸೂಪರ್‌ಟ್ಯಾಂಕರ್ ಬಿರುಗಾಳಿಯ ಸಮಯದಲ್ಲಿ ಬ್ರಿಟಾನಿಯ ಬಳಿ ನೆಲಕ್ಕೆ ಅಪ್ಪಳಿಸಿ ತುಂಡಾಗಿತ್ತು. ಇದರಿಂದ ಅದರಲ್ಲಿದ್ದ ಸಂಪೂರ್ಣ ಕಚ್ಚಾ ತೈಲ ಸೋರಿಕೆ ಆಗಿತ್ತು. 68.7 ಮಿಲಿಯನ್ ಗ್ಯಾಲನ್‌ಗಳಷ್ಟು ತೈಲವು ನೀರಿನಲ್ಲಿ ಚೆಲ್ಲಿ, 200 ಮೈಲುಗಳಷ್ಟು ಫ್ರೆಂಚ್ ಕರಾವಳಿ ಪ್ರದೇಶಕ್ಕೆ ಹಾನಿಯುಂಟು ಮಾಡಿತ್ತು. 20,000 ಸಮುದ್ರ ಪಕ್ಷಿಗಳು ಸಾವನ್ನಪ್ಪಿದ್ದವು. ಈ ತೈಲ ಸೋರಿಕೆಯನ್ನು ಶುಚಿಗೊಳಿಸಲು 100 ಶತಕೋಟಿ ಡಾಲರ್ ವೆಚ್ಚ ವಿನಿಯೋಗಿಸಲಾಯಿತು. ಜೊತೆಗೆ ತಿಂಗಳುಗಳ ಕಾಲ ಸಮಯ ಬೇಕಾಯಿತು.